
ಹೊಸಪೇಟೆ: ಅಪ್ರಾಪ್ತಳಾಗಿರುವಾಗಲೇ ತನಗೆ ಮದುವೆ ಮಾಡಿದ್ದರಿಂದ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದ 17 ವರ್ಷದ ಮಗಳನ್ನು ತಾಯಿಯೇ ಕೊಂದಿರುವ ಘಟನೆ ಇತ್ತೀಚೆಗೆ ವಿಜಯನಗರದ ಹೊಸಪೇಟೆ ಪಟ್ಟಣದಲ್ಲಿ ನಡೆದಿದೆ.
ಬಾಲಕಿಯ ತಂದೆ ಶುಕ್ರವಾರ ಈ ಸಂಬಂಧ ದೂರು ದಾಖಲಿಸಿದ್ದು, ಪೊಲೀಸರು 48 ಗಂಟೆಗಳ ಒಳಗೆ ಪ್ರಕರಣವನ್ನು ಭೇದಿಸಿದ್ದಾರೆ. ಭಾನುವಾರ ತಾಯಿ ಮತ್ತು ಸಂತ್ರಸ್ತೆಯ ಪತಿಯನ್ನು ಬಂಧಿಸಿದ್ದಾರೆ.
ಕೊಲೆಯಾದ ಬಾಲಕಿ ನಾಲ್ಕು ತಿಂಗಳ ಹಿಂದೆ ಮಂಜುನಾಥ್ ಅಲಿಯಾಸ್ ಡಾಲಿ (24) ಎಂಬುವವರನ್ನು ವಿವಾಹವಾಗಿದ್ದಳು. ಆದರೆ, ಕೆಲವು ದಿನಗಳ ನಂತರ ಆತ ಯುವತಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದನು. ಈ ಚಿತ್ರಹಿಂಸೆಯನ್ನು ಸಹಿಸಲಾಗದೆ, ಬಾಲಕಿ ತಾನು ಅಪ್ರಾಪ್ತೆಯಾಗಿದ್ದಾಗ ನನ್ನ ಮದುವೆ ಮಾಡಿದ್ದಕ್ಕಾಗಿ ಪೊಲೀಸರನ್ನು ಸಂಪರ್ಕಿಸಿ ದೂರು ನೀಡುವುದಾಗಿ ಗಂಡನಿಗೆ ಮತ್ತು ತನ್ನ ತಾಯಿಗೆ ಬೆದರಿಕೆ ಹಾಕಿದ್ದಳು.
ಇದರಿಂದ ಕೋಪಗೊಂಡ ಆಕೆಯ ತಾಯಿ, ಮಗಳ ಕತ್ತು ಹಿಸುಕಿ ಕೊಂದಿದ್ದಾಳೆ. ಬಳಿಕ ತರಣ್ (20) ಮತ್ತು ಅಕ್ಬರ್ (21) ಎಂಬ ಇಬ್ಬರು ಯುವಕರ ಸಹಾಯದಿಂದ ಮರಿಯಮ್ಮನಹಳ್ಳಿ ಸೇತುವೆಯ ಬಳಿ ಶವವನ್ನು ಹೂತು ಹಾಕಿದ್ದಾರೆ. ಬಾಲಕಿಯ ತಾಯಿ, ಪತಿ ಮಂಜುನಾಥ್ ಮತ್ತು ಇಬ್ಬರು ಸಹಚರರನ್ನು ಬಿಎನ್‌ಎಸ್ ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 103, 85, 238, 61(1), 64(2)(i) ಅಡಿಯಲ್ಲಿ ಬಂಧಿಸಲಾಗಿದೆ.
Advertisement