
ಮಡಿಕೇರಿ: ಕೊಡಗಿನ ಬಡಗ ಬನಂಗಾಲ ಗ್ರಾಮದ ಎಸ್ಟೇಟ್ ಬಳಿ 30 ಕ್ಕೂ ಹೆಚ್ಚು ಆನೆಗಳು ಹಿಂಡು ಓಡಾಡುತ್ತಿರುವುದು ಕಂಡು ಬಂದಿದ್ದು, ಇದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.
ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆನೆಗಳ ಉಪಟಣ ಹೆಚ್ಚುತ್ತಿರುವ ಬಗ್ಗೆ ದೂರುಗಳು ಬಂದ ನಂತರ ಅರಣ್ಯ ಇಲಾಖೆ ಆನೆಗಳನ್ನು ಓಡಿಸಲು ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿತ್ತು. ಈ ವೇಳೆ ಎಸ್ಟೇಟ್'ವೊಂದರ ಬಳಿ 30 ಆನೆಗಳಿರುವುದು ಪತ್ತೆಯಾಗಿದೆ.
ಎಸ್ಟೇಟ್ ಬೆಳೆಗಾರರು ಸೇರಿದಂತೆ ಗ್ರಾಮಸ್ಥರು ಎಸ್ಟೇಟ್ ಮಿತಿಯಲ್ಲಿ ಆನೆಗಳ ಚಲನೆ ಹೆಚ್ಚುತ್ತಿರುವ ಬಗ್ಗೆ ಇಲಾಖೆಗೆ ದೂರು ನೀಡಿದರು. ಇದರ ನಂತರ, ಎಲ್ಲಾ ಕಾಡು ಆನೆಗಳನ್ನು ಕಾಡಿಗೆ ಓಡಿಸಲು ಕಾರ್ಯಾಚರಣೆಯನ್ನು ಆರಂಭಿಸಲಾಯಿತು.
ತಿತಿಮತಿ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿ ಎಲ್ಲಾ ಕಾಡು ಆನೆಗಳನ್ನು ಕಾಡಿಗೆ ಓಡಿಸಲು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಕಾರ್ಯಾಚರಣೆಯ ಸಮಯದಲ್ಲಿ, ಎಸ್ಟೇಟ್ ಮತ್ತು ಗ್ರಾಮ ವ್ಯಾಪ್ತಿಯಲ್ಲಿ ಹಿಂಡಾಗಿ ನಿಂತಿದ್ದ 30 ಕ್ಕೂ ಹೆಚ್ಚು ಕಾಡು ಆನೆಗಳು ಅರಣ್ಯಾಧಿಕಾರಿಗಳ ಕಣ್ಣಿಗೆ ಬಿದ್ದಿದೆ.
ಈ ವೇಳೆ ಆನೆಗಳನ್ನು ಕಾಡಿಗೆ ಓಡಿಸಲು ಮುಂದಾಗ ಸಿಬ್ಬಂದಿಗಳಿಗೆ ಹಲವು ಸವಾಲುಗಳು ಎದುರಾಗಿವೆ. ಮಳೆಯ ನಂತರ ಎಸ್ಟೇಟ್ ಭೂಮಿ ತೇವ ಮತ್ತು ಕೆಸರುಮಯವಾಗಿದ್ದರಿಂದ ಸವಾಲಿನ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಸಾಕಷ್ಟು ಪ್ರಯತ್ನಗಳ ಬಳಿಕ ಆನೆಗಳನ್ನು ಕಾಡಿಗೆ ಓಡಿಸಲಾಗಿದೆ.
ಕೆಲ ಆನೆಗಳ ಹಿಂಡು ಮರಿಗಳನ್ನು ಹೊಂದಿದ್ದು, ಒಂದೆರಡು ಆನೆಗಳು ಹಿಂಡು ಸ್ಥಳದಿಂದ ಕದಲಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಸ್ಟೇಟ್ ಮಿತಿಯಲ್ಲಿ ಇನ್ನೂ ಉಳಿದುಕೊಂಡಿರುವ ಆನೆ ಹಿಂಡುಗಳ ಚಲನವಲನಗಳನ್ನು ಪತ್ತೆಹಚ್ಚಲು ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಏತನ್ಮಧ್ಯೆ, ಮಳೆಯಿಂದಾಗಿ ನಾವು ಈಗಾಗಲೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತೇವೆ. ಇದೀಗ ಆನೆಗಳ ಹಾವಳಿ ಪರಿಸ್ಥಿತಿ ಮತ್ತಷ್ಟು ಹದಗೆಡುವಂತೆ ಮಾಡುತ್ತಿದೆ ಎಂದು ಇಲ್ಲಿನ ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
Advertisement