ಮಂಗಳೂರು: 38 ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ನಿಗೂಢವಾಗಿ ಸಾವಿಗೀಡಾದ ಪದ್ಮಲತಾ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅವರ ಸಹೋದರಿ ಪ್ರಕರಣವನ್ನು ಮರು ತನಿಖೆ ಮಾಡಬೇಕು ಎಂದು ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ದೂರು ನೀಡಿದ್ದಾರೆ.
ಪದ್ಮಲತಾ ಅವರ ಸೋದರಿ ಇಂದ್ರಾವತಿ ಸೋಮವಾರ ತಮ್ಮ ಕುಟುಂಬಸ್ಥರೊಂದಿಗೆ ಎಸ್‌ಐಟಿ ಕಚೇರಿಗೆ ಆಗಮಿಸಿ ದೂರು ದಾಖಲಿಸಿದ್ದಾರೆ.
ನೆಲ್ಯಾಡಿ ನಿವಾಸಿ ಇಂದ್ರಾವತಿ ಸಲ್ಲಿಸಿರುವ ದೂರಿನಲ್ಲಿ, 'ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದ ನನ್ನ ಸಹೋದರಿ ಪದ್ಮಲತಾ 1986ರ ಡಿಸೆಂಬರ್ 22 ರಂದು ಧರ್ಮಸ್ಥಳ ತಲುಪಿದ ನಂತರ ನಾಪತ್ತೆಯಾಗಿದ್ದರು. ಅವರ ಕೊಳೆತ ಶವ 1987ರ ಫೆಬ್ರುವರಿ 17 ರಂದು ನೆರಿಯ ಹೊಳೆ ಬಳಿ ಪತ್ತೆಯಾಗಿತ್ತು. ನನ್ನ ತಂದೆಯ ಮನೆ ಮೊದಲು ಬೋಳಿಯಾರ್‌ನಲ್ಲಿತ್ತು. ಸಿಪಿಐಎಂ ನಾಯಕರಾಗಿದ್ದ ನನ್ನ ತಂದೆ ದಿವಂಗತ ದೇವಾನಂದ ಅವರು ನ್ಯಾಯಕ್ಕಾಗಿ ಹೋರಾಡಿದ್ದರು ಮತ್ತು ಅಪಹರಣ, ಅತ್ಯಾಚಾರ ಮತ್ತು ಕೊಲೆ ಆರೋಪದಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದರು' ಎಂದಿದ್ದಾರೆ.
'ಸಾರ್ವಜನಿಕ ಒತ್ತಡದ ನಂತರ ಆಗಿನ ಸರ್ಕಾರ ಸಿಒಡಿ ತನಿಖೆಯನ್ನು ಪ್ರಾರಂಭಿಸಿತ್ತು. ಈ ವಿಷಯವನ್ನು ವಿಧಾನಸಭಾ ಅಧಿವೇಶನದಲ್ಲಿ ಕೂಡ ಚರ್ಚಿಸಲಾಯಿತು ಮತ್ತು ಆಗಿನ ಸಚಿವ ರಾಚಯ್ಯ ಬೋಳಿಯಾರ್‌ನಲ್ಲಿರುವ ನಮ್ಮ ಮನೆಗೆ ಭೇಟಿ ನೀಡಿ, ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ಆದರೆ, ತನಿಖೆಯಿಂದ ನ್ಯಾಯ ಸಿಗಲಿಲ್ಲ ಮತ್ತು ಪ್ರಕರಣವನ್ನು ಮುಚ್ಚಿಹಾಕಲಾಯಿತು. ಅಪಹರಣ, ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ಒಂದು ದಿನ ನಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆಯೊಂದಿಗೆ ನನ್ನ ಸಹೋದರಿಯ ಶವವನ್ನು ಹೂಳಿದೆವು. ಆದ್ದರಿಂದ, ಆಕೆಯ ಶವವನ್ನು ಹೊರತೆಗೆದರೆ, ನಮಗೆ ನ್ಯಾಯ ಸಿಗುತ್ತದೆ ಎಂದು ನಾವು ಭಾವಿಸುತ್ತೇವೆ. ಎಸ್ಐಟಿ ತನಿಖೆ ನಡೆಸಿದರೆ ಈ ಪ್ರಕರಣದ ಆರೋಪಿಗಳನ್ನು ಕಾನೂನಿನ ಮುಂದೆ ತರಬಹುದು ಎಂಬ ನಂಬಿಕೆಯಿದೆ' ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರು ನೀಡಲು ಬಂದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಐಟಿ ಪ್ರಕರಣದ ತನಿಖೆ ಕೈಗೆತ್ತಿಕೊಂಡರೆ ನಮ್ಮ ಬಳಿ ಇರುವ ಸಾಕ್ಷ್ಯಗಳು ಹಾಗೂ ಮಾಹಿತಿಗಳನ್ನು ತನಿಖಾ ತಂಡಕ್ಕೆ ನೀಡಲು ಸಿದ್ದರಿದ್ದೇವೆ. ಪದ್ಮಲತಾಳ ಹತ್ಯೆಯಾಗಿ 39 ವರ್ಷಗಳು ಕಳೆದಿದ್ದರೂ, ಮರು ತನಿಖೆ ಮಾಡಿದರೆ ಈಗಲೂ ಸತ್ಯ ಹೊರಬರುವ ನಿರೀಕ್ಷೆಯಿದೆ. ಪ್ರಕರಣದ ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಎಸ್‌ಐಟಿಯನ್ನು ಒತ್ತಾಯಿಸಿದ್ದಾರೆ.
Advertisement