ಬಾದಾಮಿ ಗೆಲುವಿಗಾಗಿ ಸಿದ್ದರಾಮಯ್ಯರಿಂದ 3 ಸಾವಿರ ಮತ ಖರೀದಿ: ತನಿಖೆಗೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಪತ್ರ

ಬಾದಾಮಿ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಶ್ರೀ ಸಿದ್ದರಾಮಯ್ಯನವರ ಗೆಲುವಿನ ಅಂತರ ಕೇವಲ 1696 ಮತಗಳಾಗಿತ್ತು. ಇದು ಒಬ್ಬ ಹಾಲಿ ಮುಖ್ಯಮಂತ್ರಿಗಳಿಗೆ ಅವಮಾನಕರ ಅಂತರವೇ ಸರಿ.
Election Commission of india
ಚುನಾವಣಾ ಆಯೋಗ
Updated on

ನವದೆಹಲಿ: 2018ರ ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಗೆಲುವನ್ನು ಖಚಿತಪಡಿಸಿಕೊಳ್ಳಲು 3,000 ಮತಗಳನ್ನು ಖರೀದಿಸಿದ್ದರು ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿಕೆ ನೀಡಿದ್ದು, ಇದರ ಬೆನ್ನಲ್ಲೇ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ತನಿಖೆಗೆ ಒತ್ತಾಯಿಸಿದ್ದಾರೆ.

ಈ ಸಂಬಂಧ ಭಾರತೀಯ ಚುನಾವಣಾ ಆಯೋಗಕ್ಕೆ ಮಂಗಳವಾರ ಪತ್ರ ಬರೆದಿರುವ ಅವರು, ಹೇಳಿಕೆ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ದಶಕಗಳಿಂದ ಸಿದ್ದರಾಮಯ್ಯನವರ ಆಪ್ತರು ಮತ್ತು ಸಲಹೆಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. 2018ರಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಬಿ.ಬಿ.ಚಿಮ್ಮನಕಟ್ಟಿ ಅವರೊಂದಿಗೆ 3000 ಮತಗಳನ್ನು ಖರೀದಿಸಲು ಸಹಾಯ ಮಾಡಿದ್ದೇವೆ, ಇದರಿಂದಾಗಿ ಶ್ರೀ ಸಿದ್ದರಾಮಯ್ಯನವರು ಬಾದಾಮಿ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.

ಬಾದಾಮಿ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಶ್ರೀ ಸಿದ್ದರಾಮಯ್ಯನವರ ಗೆಲುವಿನ ಅಂತರ ಕೇವಲ 1696 ಮತಗಳಾಗಿತ್ತು. ಇದು ಒಬ್ಬ ಹಾಲಿ ಮುಖ್ಯಮಂತ್ರಿಗಳಿಗೆ ಅವಮಾನಕರ ಅಂತರವೇ ಸರಿ. ಅವರ ಗೆಲುವಿನ ಅಂತರಕ್ಕೆ ಹೋಲಿಸಿದರೆ ಆಗ ಚಲಾವಣೆಯಾಗಿದ್ದ 2007 NOTA ಮತಗಳ ಸಂಖ್ಯೆಯೇ ಅಧಿಕವಾಗಿತ್ತು. 2018ರಲ್ಲಿ ಇಬ್ರಾಹಿಂ ರವರು ಪ್ರಮುಖ ಕಾಂಗ್ರೆಸ್ ನಾಯಕರಾಗಿ ಗುರುತಿಸಿಕೊಂಡಿದ್ದರು ಮತ್ತು ಆಗಿನ ಎಲ್ಲಾ ಉಲ್ಲೇಖ ಮತ್ತು ಮಾಹಿತಿಗಳ ಪ್ರಕಾರ, ಅವರ ಸ್ನೇಹಿತನ ಚುನಾವಣೆಯ ಉಸ್ತುವಾರಿ ವಹಿಸಿದ್ದರು.

ತಮ್ಮ ಸ್ನೇಹಿತನನ್ನು ಉಳಿಸಲು 3000 ಮತಗಳನ್ನು ಹೇಗೆ ಮತ್ತು ಯಾರಿಂದ ಖರೀದಿಸಿದರು ಎಂದು ಇಬ್ರಾಹಿಂ ಹೇಳಿದರೆ ದೊಡ್ಡ ಉಪಕಾರವಾಗುತ್ತದೆ. ಮತಗಳ ಖರೀದಿಗೆ ಶ್ರೀ ಸಿದ್ದರಾಮಯ್ಯನವರೇ ಹಣ ನೀಡಿದ್ದು, ಹಣ ಪಾವತಿಗೆ ಆರು ತಿಂಗಳು ತೆಗೆದುಕೊಂಡಿದ್ದರು ಎಂದು ಇಬ್ರಾಹಿಂ ಹೇಳಿದ್ದಾರೆ. ಆಗ ಸ್ವತಃ ಶಾಸಕರಾಗಿದ್ದ ಮತ್ತು ಮಾಜಿ ಕೇಂದ್ರ ಸಚಿವರಾಗಿದ್ದ ವ್ಯಕ್ತಿಯೊಬ್ಬರು ಮಾಡಿರುವ ಈ ಚುನಾವಣಾ ಭ್ರಷ್ಟಾಚಾರದ ಆರೋಪವನ್ನು ಚುನಾವಣಾ ಆಯೋಗವು ಗಮನಿಸಿ ತನಿಖೆಗೆ ಆದೇಶಿಸಬಹುದು ಎಂದು ಹೇಳಿದ್ದಾರೆ.

2018ರಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧದ ಕದನದಲ್ಲಿ ನಮ್ಮ ಪಕ್ಷದ ಶ್ರೀರಾಮುಲು ಪರಾಭವಗೊಂಡಿದ್ದರು. ಬಹುಶಃ ಶ್ರೀರಾಮುಲು ಅವರೂ ಕೂಡ 3000 ಮತಗಳನ್ನು ಹೇಗೆ ಖರೀದಿಸಲಾಯಿತು ಎಂಬುದರ ಕುರಿತು ಸ್ವಲ್ಪ ಮಾಹಿತಿ ಮತ್ತು ಒಳನೋಟ ಹೊಂದಿರಲೂಬಹುದು. ಅವರೇನಾದರೂ ಈ ಕುರಿತು ಮಾಹಿತಿ ನೀಡಿದರೆ ವಾಸ್ತವದಲ್ಲಿ ಏನಾಗಿದ್ದಿರಬಹುದು ಎನ್ನುವುದರ ಕುರಿತು ನಮಗೆ ಇನ್ನಷ್ಟು ತಿಳಿಯಲಿದೆ. 2018ರಲ್ಲಿ ಎರಡು ಕಡೆ ಸ್ಪರ್ಧಿಸಿದ್ದ ಅವರು, ಈ ಮತ ಖರೀದಿ ಸಂಭವಿಸದಿದ್ದರೆ, ವಾಸ್ತವದಲ್ಲಿ ಎರಡೂ ಸ್ಥಾನಗಳಲ್ಲಿ ಗೆಲ್ಲುತ್ತಿದ್ದರು.

Election Commission of india
ಬಾದಾಮಿಯಲ್ಲಿ ಸಿದ್ದರಾಮಯ್ಯ ಸೋಲ್ತಿದ್ರು; ನಾನು ಚಿಮ್ಮನಕಟ್ಟಿ ಸೇರಿ 3000 ಮತ ಖರೀದಿಸಿದ್ದರಿಂದ ಗೆದ್ರು: ಇಬ್ರಾಹಿಂ

2018ರಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯನವರ ಅಲ್ಪ ಅಂತರದ ಗೆಲುವಿನ ಬಗ್ಗೆ ಶ್ರೀ ಇಬ್ರಾಹಿಂ ಮಾತನಾಡಿದ್ದಾರೆ. ಹಾಗೆಯೇ, 2006ರಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯನವರ ಉಪಚುನಾವಣೆಯ ಬಗ್ಗೆಯೂ ಅವರು ಮಾತನಾಡಬೇಕು. ಆಗಲೂ ಶ್ರೀ ಇಬ್ರಾಹಿಂ ಅವರ ಆಪ್ತ ಸ್ನೇಹಿತರಾದ್ದರು ಮತ್ತು ಚುನಾವಣಾ ಕಾರ್ಯತಂತ್ರ ರೂಪಿಸಿದ್ದರು. ಅದು ಕಾಂಗ್ರೆಸ್ ಸೇರಿದ ನಂತರ ಶ್ರೀ ಸಿದ್ದರಾಮಯ್ಯನವರ ಮೊದಲ ಚುನಾವಣೆ. ಆಗ ಅವರ ಗೆಲುವಿನ ಅಂತರ ಕೇವಲ 257 ಮತಗಳು. ಆಗಲೂ ಮತಗಳನ್ನು ಖರೀದಿಸಲಾಗಿತ್ತೇ? ಆಗ ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆಗ ಅವರು ಶ್ರೀ ಸಿದ್ದರಾಮಯ್ಯನವರ ಗೆಲುವನ್ನು ನಿರ್ವಹಿಸಲಾಗಿತ್ತೇ? ಆ ಚುನಾವಣಾ ಪ್ರಕ್ರಿಯೆ ನಡೆಸಿದ ಅಧಿಕಾರಿಗಳು ಯಾರು?

ಅದೇನೇ ಇರಲಿ, ರಾಹುಲ್ ಗಾಂಧಿ ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಬಂದು ಮತದಾರರ ಪಟ್ಟಿಯ ಬಗ್ಗೆ ಮನಬಂದಂತೆ ಆರೋಪಗಳನ್ನು ಮಾಡಿ ಹಾವಿನ ಬುಟ್ಟಿಯನ್ನೇ ತೆರೆದಿದ್ದಾರೆ. ಇದರಿಂದ ಅವರ ಮುಖ್ಯಮಂತ್ರಿ ಸೇರಿದಂತೆ ಅವರ ಪಕ್ಷದ ಸದಸ್ಯರೇ ಬೇರೆಯವರಿಗಿಂತ ಹೆಚ್ಚು ಬಾಧಿತರಾಗಿದ್ದಾರೆ. ಬೆಂಗಳೂರಿಗೆ ಬಂದಿದ್ದಕ್ಕಾಗಿ ನಾವು ರಾಹುಲ್ ಗಾಂಧಿಯವರಿಗೆ ಧನ್ಯವಾದ ಹೇಳಬೇಕು, ಏಕೆಂದರೆ ಅವರು ಅಂತಿಮವಾಗಿ ಮಾಡಿದ್ದೆಂದರೆ, ತಮ್ಮದೇ ಸರ್ಕಾರವನ್ನು ಅಸ್ಥಿರಗೊಳಿಸಿದ್ದು, ತಮ್ಮ ಕಾಲಿನ ಮೇಲೆ ತಾವೇ ಕಲ್ಲು ಹಾಕಿಕೊಳ್ಳುವುದರಲ್ಲಿ ನಿಸ್ಸೀಮರಾಗಿರುವ ಅವರು ಈ ಬಾರಿ ದೊಡ್ಡ ಚಪ್ಪಡಿಯನ್ನೇ ಎಳೆದುಕೊಂಡಿದ್ದಾರೆ. ರಾಹುಲ್ ಗಾಂಧಿಯವರ ಮಾತನ್ನು ವಿರೋಧಿಸಿದ್ದರಿಂದ, ಪ್ರಜಾಪ್ರಭುತ್ವದ ರೀತಿ-ನೀತಿಗಳಿಗೆ ವಿಪರೀತವಾಗಿ ಸಹಕಾರ ಸಚಿವ ಶ್ರೀ ಕೆ.ಎನ್.ರಾಜಣ್ಣ ಅವರನ್ನು ವಜಾಗೊಳಿಸಲಾಗಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಪತನದ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com