
ಬೆಂಗಳೂರು: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೋ ಅನಾಮಿಕ ಹೇಳಿದನೆಂದು ಇನ್ನೆಷ್ಟು ಅಗೆಯುತ್ತೀರಿ? ಈವರೆಗೆ ಅಗೆಯಲಾಗಿರುವ ಗುಂಡಿಯಲ್ಲಿ ಏನು ಸಿಕ್ಕಿದೆ ಎಂದು ಸ್ಪಷ್ಟಪಡಿಸಿ ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಆಗ್ರಹಿಸಿದೆ.
ಅಧಿವೇಶನದಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಕಾರ್ಕಳ ಶಾಸಕ ಮತ್ತು ಮಾಜಿ ಸಚಿವ ವಿ. ಸುನೀಲ್ ಕುಮಾರ್ ಅವರು, ಪ್ರಕರಣ ಕುರಿತು ಎಸ್ಐಟಿ ನಡೆಸುತ್ತಿರುವ ತನಿಖೆಯ ಮಧ್ಯಂತರ ವರದಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಎಸ್‌ಐಟಿ ತನಿಖೆಯನ್ನು ಬಿಜೆಪಿ ಸ್ವಾಗತಿಸುತ್ತದೆ. ಆದರೆ, ತನಿಖೆಯ ಹೆಸರಿನಲ್ಲಿ ಕೆಲವು ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹರಡುತ್ತಿವೆ. ಇದರಿಂದ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟಾಗುತ್ತಿದೆ ಎಂದು ಹೇಳಿದರು.
ಆರಂಭದಲ್ಲಿ ಧರ್ಮಸ್ಥಳದಲ್ಲಿ ಕೆಲವು ಶವಗಳನ್ನು ಸಮಾಧಿ ಮಾಡಿರುವುದಾಗಿ ಹೇಳಿಕೊಂಡ ವ್ಯಕ್ತಿ 13 ಸ್ಥಳಗಳನ್ನು ಗುರುತಿಸಿದ್ದಾರೆ. ಆದರೆ, ಈಗ ಸಂಖ್ಯೆ ಹೆಚ್ಚಾಗಿದೆ. 15-16 ಗುಂಡಿ ತೆಗೆದರೂ ಏನೂ ಸಿಕ್ಕಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಹೀಗಾಗಿ ಊಹಾಪೋಹಾಗಳಿಗೆ ಸರಕಾರ ತೆರೆ ಎಳೆಯಬೇಕು. ತನಿಖೆ ಇನ್ಯಾವುದೋ ದಿಕ್ಕಿನ ಕಡೆಗೆ ಹೋಗುವ ಮುನ್ನ ತನಿಖೆ ಯಾವ ಹಂತದಲ್ಲಿ ನಡೆಯುತ್ತಿದೆ ಎಂಬುದನ್ನು ತಿಳಿಸಬೇಕು.
ಯಾರ್ಯಾರೋ ಬಂದು ಹೇಳುತ್ತಾರೆ ಎಂದು ಎಷ್ಟೆಷ್ಟೋ ಗುಂಡಿಗಳನ್ನು ತೆಗೆಯಲು ಸಾಧ್ಯವಿಲ್ಲ. ಧಾರ್ಮಿಕ ನಂಬಿಕೆ ಮೇಲೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಧರ್ಮಸ್ಥಳದಲ್ಲಿ ಶವಗಳನ್ನು ಹೂಳಿರುವ ಸ್ಥಳಗಳು ತಮಗೆ ತಿಳಿದಿವೆ ಎಂದು ಹೇಳಿಕೊಂಡು ಮತ್ತಶ್ಟು ಜನರು ಮುಂದೆ ಬಂದರೆ ಎಸ್‌ಐಟಿ ಕಾರ್ಯಾಚರಣೆಯನ್ನು ಮುಂದುವರಿಸುತ್ತದೆಯೇ? ಇನ್ನೆಷ್ಟು ಗುಂಡಿ ತೆಗೆಯುತ್ತೀರಿ? ಎಂದು ಪ್ರಶ್ನಿಸಿದರು.
ಧರ್ಮಸ್ಥಳ ದೇವಾಲಯದ ಆಡಳಿತ ಮಂಡಳಿಯ ವಿರುದ್ಧ ತಪ್ಪು ಮಾಹಿತಿ ಮತ್ತು ಆರೋಪಗಳು ಹರಡಿದರೆ ಬಿಜೆಪಿ ಸಹಿಸುವುದಿಲ್ಲ ಎಂದೂ ಎಚ್ಚರಿಸಿದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಬಂದ ದೂರನ್ನು ಪೊಲೀಸರು ದಾಖಲಿಸಿಕೊಂಡು ತನಿಖೆ ನಡೆಸಿದರು. ಆ ಭಾಗದ ಜನಸಮುದಾಯದ ಒತ್ತಾಯ ಮೇರೆಗೆ ಜು. 19ರಂದು ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಿದ್ದೇವೆ, ತನಿಖೆ ನಡೆಯುತ್ತಿದೆ. ಅದು ಪೂರ್ಣ ಆಗಬೇಕು. ಅದಕ್ಕೂ ಕಾಲಮಿತಿ ಇರುತ್ತದೆ. ನೂರಾರು ಗುಂಡಿ ಅಗೆಯಲು ಸಾಧ್ಯವಿಲ್ಲ. ಒಂದು ಹಂತಕ್ಕೆ ತಲುಪಿದ ಮೇಲೆ ಎಸ್‌ಐಟಿ ವರದಿ ಕೊಡುತ್ತದೆ. ಅನಂತರ ಉತ್ತರ ಕೊಡುತ್ತೇನೆ ಎಂದು ಹೇಳಿದರು.
Advertisement