
ಬೆಂಗಳೂರು: ಬೃಹತ್ ಬೆಂಗಳೂರು ಮಾಹನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಗುರುವಾರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಸ್ತೆ ಗುಂಡಿಗಳ ದುರಸ್ತಿ ಕುರಿತು ವರ್ಚುವಲ್ ಸಭೆ ಉದ್ದೇಶಿಸಿ ಮಾತನಾಡಿದ ರಾವ್, "ನಿಮ್ಮ ವಲಯಗಳಿಗೆ ಸಮಗ್ರ ಸೂಕ್ಷ್ಮ ಯೋಜನೆಗಳನ್ನು ಅಭಿವೃದ್ಧಿಪಡಿಸಿ ಮತ್ತು ಗಡುವಿನೊಳಗೆ ಹಾಟ್ ಮಿಕ್ಸ್, ಕೋಲ್ಡ್ ಮಿಕ್ಸ್ ವಸ್ತುಗಳನ್ನು ಬಳಸಿ ಎಲ್ಲಾ ಗುಂಡಿಗಳನ್ನು ಮುಚ್ಚಬೇಕು ಎಂದು ಸೂಚಿಸಿದ್ದಾರೆ.
ಡಾಂಬರೀಕರಣ ಕೈಗೊಂಡಿರುವ ರಸ್ತೆಗಳಲ್ಲಿ ತ್ವರಿತವಾಗಿ ಕೆಲಸ ಮುಗಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತರು ತಾಕೀತು ಮಾಡಿದರು.
ಸಂಚಾರ ಪೊಲೀಸರ ಮಾಹಿತಿಯ ಪ್ರಕಾರ, ನಗರದಾದ್ಯಂತ 4,500 ಗುಂಡಿಗಳನ್ನು ಗುರುತಿಸಲಾಗಿದೆ, ಅವುಗಳಲ್ಲಿ 3,621 ಬಿಬಿಎಂಪಿ ವ್ಯಾಪ್ತಿಗೆ ಬರುತ್ತವೆ.
ಗುರುತಿಸಲಾದ ಎಲ್ಲಾ ಗುಂಡಿಗಳನ್ನು ತಕ್ಷಣವೇ ಮುಚ್ಚಬೇಕು. ಇಲ್ಲದಿದ್ದರೆ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು
ಸಂಚಾರ ಪೊಲೀಸರು ಗುರುತಿಸಿದ ಗುಂಡಿಗಳನ್ನು ಭೌಗೋಳಿಕ ಮಾಹಿತಿ ವ್ಯವಸ್ಥೆ(ಜಿಐಎಸ್) ಮೂಲಕ ನಕ್ಷೆ ಮಾಡಲಾಗುತ್ತದೆ ಮತ್ತು ದುರಸ್ತಿ ನಂತರದ ಫೋಟೋಗಳನ್ನು ಪರಿಶೀಲನೆಗಾಗಿ ಅಪ್‌ಲೋಡ್ ಮಾಡಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ವಿಶೇಷ ಆಯುಕ್ತ(ಯೋಜನೆ) ಕರಿಗೌಡ, ಜಂಟಿ ಪೊಲೀಸ್ ಆಯುಕ್ತ(ಸಂಚಾರ) ಕಾರ್ತಿಕ್ ರೆಡ್ಡಿ, ವಲಯ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
Advertisement