
ನವದೆಹಲಿ: ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ, ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ನಿವಾಸದ ಮೇಲೆ ಬುಧವಾರ (ಆ.15) ದಾಳಿ ನಡೆಸಿದ ಜಾರಿ ನಿರ್ದೇಶನಾಲಯ (ED) 1.41 ಕೋಟಿ ರೂ. ನಗದು, ಅವರ ಕುಟುಂಬದ ಬ್ಯಾಂಕ್ ಲಾಕರ್‌ಗಳಿಂದ 6.75 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿರುವುದಾಗಿ ಶುಕ್ರವಾರ ತಿಳಿಸಿದೆ.
ಬೆಲೆಕೇರಿ ಬಂದರಿನಿಂದ ಕಾರವಾರ ಶಾಸಕ ಸತೀಶ್ ಸೈಲ್ ಅವರಿಗೆ ಸೇರಿದ ಕಂಪನಿಯಿಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆಗಸ್ಟ್ 13-14 ರಂದು ಕಾರವಾರ, ಗೋವಾ, ಮುಂಬೈ ಮತ್ತು ದೆಹಲಿಯಲ್ಲಿ ತನಿಖಾ ಸಂಸ್ಥೆ ಶೋಧ ನಡೆಸಿತ್ತು.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಶೋಧ ನಡೆಸಲಾದ ಇತರ ಸಂಸ್ಥೆಗಳಲ್ಲಿ ಆಶಾಪುರ ಮಿನೆಕೆಮ್, ಶ್ರೀ ಲಾಲ್ ಮಹಲ್, ಸ್ವಸ್ತಿಕ್ ಸ್ಟೀಲ್ಸ್ (ಹೊಸೆಪೇಟೆ), ಐಎಲ್‌ಸಿ ಇಂಡಸ್ಟ್ರೀಸ್, ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್ ಸೇರಿವೆ ಎಂದು ಇ.ಡಿ ತಿಳಿಸಿದೆ.
ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ.ಲಿ. ಇತರರೊಂದಿಗೆ ಶಾಮೀಲಾಗಿ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ್ದಕ್ಕಾಗಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈ ಎಲ್ಲಾ ಸಂಸ್ಥೆಗಳನ್ನು ದೋಷಿಗಳೆಂದು ಘೋಷಿಸಿದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಮಲ್ಲಿಕಾರ್ಜುನ ಶಿಪ್ಪಿಂಗ್ ಸೈಲ್ ಅವರಿಗೆ ಸೇರಿದ ಕಂಪನಿ ಎಂದು ವರದಿಯಾಗಿದೆ.
ವಿಶೇಷ ನ್ಯಾಯಾಲಯವು ಹೊರಡಿಸಿದ ಈ ಶಿಕ್ಷೆಯ ಆದೇಶವನ್ನು ಆಧರಿಸಿ ಶಾಸಕರು ಮತ್ತು ಇತರರ ವಿರುದ್ಧದ ತನಿಖೆ ನಡೆಸಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಆದರೆ, ಕಳೆದ ವರ್ಷ ಕರ್ನಾಟಕ ಹೈಕೋರ್ಟ್ ಶಾಸಕರ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಆದೇಶಿಸಿತ್ತು.
ಶೋಧದ ವೇಳೆ ಸೈಲ್ ಅವರ ನಿವಾಸದಿಂದ 1.41 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಶ್ರೀ ಲಾಲ್ ಮಹಲ್ ಲಿಮಿಟೆಡ್ ಕಚೇರಿಯಿಂದ 27 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಸೈಲ್ ಕುಟುಂಬದ ಬ್ಯಾಂಕ್ ಲಾಕರ್‌ನಿಂದ 6.75 ಕೆಜಿ ತೂಕದ ಚಿನ್ನಾಭರಣ ಮತ್ತು ಗಟ್ಟಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಶೋಧ ಕಾರ್ಯಾಚರಣೆಯ ಸಮಯದಲ್ಲಿ ಪ್ರಕರಣದಲ್ಲಿ ಭಾಗಿಯಾದವರ ಬ್ಯಾಂಕ್ ಖಾತೆಯಲ್ಲಿದ್ದ 14.13 ಕೋಟಿ ರೂ. ಮೊತ್ತವನ್ನು ತಡೆಹಿಡಿಯಲಾಗಿದೆ. ದಾಖಲೆಗಳು, ಇ-ಮೇಲ್‌ಗಳು, ದಾಖಲೆಗಳು ಇತ್ಯಾದಿಗಳ ರೂಪದಲ್ಲಿ ಕೆಲವು ಆಪಾದನೆ ಪುರಾವೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅದು ಹೇಳಿದೆ.
Advertisement