79ನೇ ಸ್ವಾತಂತ್ರ್ಯೋತ್ಸವ: RSS ಪ್ರಚಾರಕನಂತೆ ಪ್ರಧಾನಿ ಮೋದಿ ಭಾಷಣ; ಸಿಎಂ ಸಿದ್ದರಾಮಯ್ಯ ಕಿಡಿ

ಸ್ವತಂತ್ರ ಭಾರತದಲ್ಲಿ ಬಿಜೆಪಿ ಸೇರಿದಂತೆ ಯಾವ ಪಕ್ಷಗಳ ಪ್ರಧಾನ ಮಂತ್ರಿಯವರೂ ಈ ರೀತಿ ಸ್ವಾತಂತ್ರ್ಯೋತ್ಸವದ ವೇದಿಕೆಯನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಂಡಿಲ್ಲ.
CM Siddaramaiah and PM Modi
ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿ
Updated on

ಬೆಂಗಳೂರು: 79ನೇ ಸ್ವಾತಂತ್ರ್ಯೋತ್ಸವದ ದಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಆರ್ ಎಸ್ ಎಸ್ ಅನ್ನು ಹಾಡಿ ಹೊಗಳಿರುವುದು ಸ್ವಾತಂತ್ರ್ಯಹೋರಾಟ, ರಾಷ್ಟ್ರಧ‍್ವಜ ಮತ್ತು ಸಂವಿಧಾನದ ನಿಜ ಆಶಯಗಳಿಗೆ ಮಾಡಿರುವ ಅವಮಾನವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಮುಖ್ಯಮಂತ್ರಿ, ಸ್ವಾತಂತ್ರ್ಯಹೋರಾಟದಲ್ಲಿ ಎಂದೂ ಭಾಗವಹಿಸದೆ ಇದ್ದ ಮತ್ತು ಇತ್ತೀಚಿನ ವರೆಗೆ ನಮ್ಮ ಹೆಮ್ಮೆಯ ತ್ರಿವರ್ಣ ರಾಷ್ಟ್ರಧ್ವಜವನ್ನು ತಮ್ಮ ಕಚೇರಿಯಲ್ಲಿ ಆರೋಹಣ ಮಾಡಲು ನಿರಾಕರಿಸಿದ್ದ ಆರ್ ಎಸ್ ಎಸ್ ಗೆ ಅಭಿನಂದನೆ ಸಲ್ಲಿಸುವ ಮೂಲಕ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪವಿತ್ರವಾದ ವೇದಿಕೆಯನ್ನು ನರೇಂದ್ರ ಮೋದಿ ಅವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ವತಂತ್ರ ಭಾರತದಲ್ಲಿ ಬಿಜೆಪಿ ಸೇರಿದಂತೆ ಯಾವ ಪಕ್ಷಗಳ ಪ್ರಧಾನ ಮಂತ್ರಿಯವರೂ ಈ ರೀತಿ ಸ್ವಾತಂತ್ರ್ಯೋತ್ಸವದ ವೇದಿಕೆಯನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಂಡಿಲ್ಲ. ನರೇಂದ್ರ ಮೋದಿಯವರು ದೇಶದ ಜನ ಗೌರವಿಸುವ ಈ ವೇದಿಕೆಯ ಘನತೆ-ಗೌರವಗಳನ್ನು ಮಣ್ಣು ಪಾಲು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಆರ್ ಎಸ್ ಎಸ್ ನಾಯಕರು ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿದ್ದಕ್ಕೆ ಇತಿಹಾಸದ ಪುಟಗಳಲ್ಲಿ ದಾಖಲೆಗಳೇ ಇಲ್ಲ. ಅದೇ ರೀತಿ ನಾಗಪುರದಲ್ಲಿರುವ ಆರ್ ಎಸ್ ಎಸ್ ನ ಕೇಂದ್ರ ಕಚೇರಿಯಲ್ಲಿ 2001ರ ವರೆಗೆ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವದ ದಿನವೂ ರಾಷ್ಟ್ರ ಧ್ವಜದ ಧ್ವಜಾರೋಹಣ ಮಾಡಿರಲೇ ಇಲ್ಲ. 2001ರಲ್ಲಿ ಧ್ವಜಾರೋಹಣ ಮಾಡಿದ್ದ ತಮ್ಮದೇ ಸಂಘಟನೆಯ ಯುವಕರ ವಿರುದ್ಧ ಆರ್ ಎಸ್ ಎಸ್ ದೂರು ಕೊಟ್ಟು ಜೈಲಿಗೆ ಅಟ್ಟಿತ್ತು ಎನ್ನುವುದನ್ನು ದೇಶದ ಜನ ಮರೆತಿಲ್ಲ. ಕೆಂಪುಕೋಟೆ ಭಾರತೀಯ ಜನತಾ ಪಕ್ಷದ ರಾಜಕೀಯ ವೇದಿಕೆ ಅಲ್ಲ, ಆ ಸ್ಥಳದಲ್ಲಿ ಪಕ್ಷಾತೀತವಾಗಿ ಆಚರಿಸಲಾಗುವ ಸ್ವಾತಂತ್ರ್ಯತ್ಸೋವದಲ್ಲಿ ಎಲ್ಲ ಜಾತಿ-ಧರ್ಮ, ಪಕ್ಷ-ಪಂಥಗಳ ಜನ ಭಾಗವಹಿಸುತ್ತಾರೆ. ಅಂತಹ ಪವಿತ್ರ ವೇದಿಕೆಯಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಮಾತನಾಡದೆ ಆರ್ ಎಸ್ ಎಸ್ ಪ್ರಚಾರಕನಂತೆ ಮಾತನಾಡಿರುವುದು ದುರದೃಷ್ಟಕರ ಎಂದಿದ್ದಾರೆ.

ಕಳೆದ ಹನ್ನೊಂದು ವರ್ಷಗಳಲ್ಲಿ ಸ್ವಾತಂತ್ರ್ಯೋತ್ಸವದ ದಿನ ಆರ್ ಎಸ್ ಎಸ್ ಅನ್ನು ನೆನಪು ಮಾಡಿಕೊಳ್ಳದ ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿ ಆರ್ ಎಸ್ ಎಸ್ ಸೇವೆಯನ್ನು ಸ್ಮರಿಸಿಕೊಂಡಿರುವುದು ಖಂಡಿತ ಅದರ ಮೇಲಿನ ಅಭಿಮಾನದಿಂದ ಅಲ್ಲ. ಇದಕ್ಕೆ ಮುಖ್ಯ ಕಾರಣ ಕುಸಿಯುತ್ತಿರುವ ಜನಪ್ರಿಯತೆಯಿಂದಾಗಿ ಅವರಲ್ಲಿ ಹುಟ್ಟಿರುವ ಅಭದ್ರತೆ. ಕಳೆದ ಚುನಾವಣೆಯಲ್ಲಿನ ಹಿನ್ನಡೆಯ ನಂತರ ಮೋದಿಯವರು ತಮ್ಮ ಮಾತೃಸಂಸ್ಥೆಗೆ ಸಾಷ್ಟಾಂಗ ನಮಸ್ಕಾರ ಹಾಕುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

CM Siddaramaiah and PM Modi
ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ RSS ನ 100 ವರ್ಷಗಳ ಸಾಧನೆ ಸ್ಮರಿಸಿದ ಪ್ರಧಾನಿ ಮೋದಿ!

ವಿಶ್ವದ ಅತಿ ದೊಡ್ಡ ಸರ್ಕಾರೇತರ ಸೇವಾ ಸಂಸ್ಥೆ ಎಂದು ನರೇಂದ್ರ ಮೋದಿ ಅವರು ಬಣ್ಣಿಸಿರುವ ಆರ್ ಎಸ್ ಎಸ್, ಇಂದಿನ ವರೆಗೂ ಅಧಿಕೃತವಾಗಿ ನೋಂದಣಿಯಾಗದ, ಸಾರ್ವಜನಿಕ ದೇಣಿಗೆ ಸಂಗ್ರಹಿಸಿದರೂ ತೆರಿಗೆ ಪಾವತಿ ಮಾಡದ ಮತ್ತು ಸಂವಿಧಾನ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಟನೆಯಾಗಿದೆ. ಪಾರದರ್ಶಕತೆಯಾಗಲಿ, ಉತ್ತರದಾಯಿತ್ವವಾಗಲಿ ಇಲ್ಲದ ಆರ್ ಎಸ್ ಎಸ್ ರಹಸ್ಯ ಸಂಘಟನೆಯಾಗಿಯೇ ಕೆಲಸ ಮಾಡುತ್ತಿರುವುದನ್ನು ದೇಶದ ಜನತೆ ಗಮನಿಸಿದ್ದಾರೆ.

ಕೋಮುವಾದವನ್ನೇ ಉಸಿರಾಗಿಸಿಕೊಂಡ ಆರ್ ಎಸ್ ಎಸ್ ಹಿಂದೂ ಧರ್ಮವನ್ನು ರಾಜಕೀಯ ಆಯುಧವಾಗಿ ಬಳಸಿಕೊಂಡು ಭಾರತೀಯರನ್ನು ಒಡೆದು ಹಾಕಿ ಭಾರತೀಯ ಜನತಾ ಪಕ್ಷವನ್ನು ರಾಜಕೀಯವಾಗಿ ಬಲಪಡಿಸಲು ಹಗಲು-ರಾತ್ರಿ ಶ್ರಮಿಸುತ್ತಿದೆ. ಇವರಿಗೆ ದೇಶದ ಬಗ್ಗೆಯಾಗಲಿ, ಹಿಂದೂ ಧರ್ಮದ ಬಗ್ಗೆಯಾಗಲಿ ಯಾವ ಪ್ರೀತಿ-ಅಭಿಮಾನ, ಬದ್ಧತೆಯಾಗಲಿ ಇಲ್ಲ ಎನ್ನುವುದು ಸಾಬೀತಾಗಿದೆ ಎಂದಿದ್ದಾರೆ.

ಸ್ವಾತಂತ್ರ್ಯದಿನಾಚರಣೆಯ ವೇದಿಕೆಯನ್ನು ಆರ್ ಎಸ್ ಎಸ್ ಗೆ ಅಭಿನಂದನೆ ಸಲ್ಲಿಸಲು ದುರುಪಯೋಗ ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಾತುಗಳನ್ನು ಹಿಂದಕ್ಕೆ ಪಡೆದು ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

CM Siddaramaiah and PM Modi
ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲೂ ಮೋದಿ ದಾಖಲೆ: 103 ನಿಮಿಷ; ನೆಹರು ನಂತರ ಅತಿ ಹೆಚ್ಚು ಸಮಯ ಭಾಷಣ ಮಾಡಿದ ಪ್ರಧಾನಿ ಎಂಬ ಹೆಗ್ಗಳಿಕೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com