
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನಡೆದಿದೆ ಎಂಬ ಸುದ್ದಿಗಳ ನಡುವಲ್ಲೇ ದೇವಾಲಯ ಆಡಳಿತದೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುವ ಸಂಕೇತವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ಬಿಜೆಪಿ ನಿಯೋಗ ಭಾನುವಾರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರನ್ನು ಭೇಟಿ ಮಾಡಿತು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಎಂಎಲ್‌ಸಿ ಸಿಟಿ ರವಿ, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಪಕ್ಷದ ಶಾಸಕರು ನಿಯೋಗದಲ್ಲಿದ್ದರು. ನಿಯೋಗವು ಧರ್ಮಾಧಿಕಾರಿಯನ್ನು ಭೇಟಿ ಮಾಡುವ ಮೊದಲು ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿತು.
ನಂತರ, ದೇವಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ಪ್ರಸ್ತುತ ಹರಡುತ್ತಿರುವ "ತಪ್ಪು ಮಾಹಿತಿ"ಯನ್ನು ತಡೆಯಲು ರಾಜ್ಯ ಸರ್ಕಾರ ತ್ವರಿತವಾಗಿ ಕಾರ್ಯನಿರ್ವಹಿಸಬೇಕಾಗಿತ್ತು. ಆದರೆ, ಅದರ ಬದಲು ಮೌನ ತಾಳಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕರ್ತವ್ಯದಲ್ಲಿ ವಿಫಲರಾಗಿದ್ದಾರೆ. ಧರ್ಮಸ್ಥಳ, ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯ ಮಾನಹಾನಿಯನ್ನು ನಿಲ್ಲಿಸದಿದ್ದಕ್ಕಾಗಿ ಜನರ ಕ್ಷಮೆಯಾಚಿಸಬೇಕು. ಬಿಜೆಪಿ ಈ ವಿಷಯವನ್ನು ರಾಜಕೀಯಗೊಳಿಸುತ್ತಿಲ್ಲ. ಬದಲಿಗೆ ಈ ಗೊಂದಲವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸುತ್ತಿದೆ ಎಂದು ಹೇಳಿದರು.
ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ (SIT) ರಚಿಸಿರುವುದನ್ನು ಬಿಜೆಪಿ ಸ್ವಾಗತಿಸುತ್ತದೆ. ಆದರೆ, ಭಕ್ತರಲ್ಲಿ ಗೊಂದಲ ಉಂಟಾಗದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಸುಳ್ಳು ಪ್ರಚಾರವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಪಾರದರ್ಶಕ ತನಿಖೆಗೆ ಮಾತ್ರ ಒತ್ತಾಯಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಎಡಪಂಥೀಯ ಗುಂಪುಗಳ ಒತ್ತಡದಿಂದಾಗಿ SIT ತನಿಖೆ ಆರಂಭಿಸಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ಆರೋಪಗಳ ಹಿಂದೆ ಪಿತೂರಿ ಇದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆಂದು ತಿಳಿಸಿದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ವಿವಾದಕ್ಕೆ ಬಿಜೆಪಿಯನ್ನು ದೂಷಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, “ದಿನೇಶ್ ಗುಂಡೂರಾವ್ ಅಥವಾ ಶಿವಕುಮಾರ್ ನೀಡಿದ ಹೇಳಿಕೆಗಳ ಬಗ್ಗೆ ಖಂಡ್ರೆ ಏನು ಹೇಳುತ್ತಾರೆ? ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಪಿತೂರಿ ಸರಿಯಾದ ಸಮಯದಲ್ಲಿ ಬಹಿರಂಗಗೊಳ್ಳುತ್ತದೆ ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ. ಆ ಸಮಯ ಇನ್ನೂ ಬಂದಿಲ್ಲವೇ? ಅಥವಾ ಸರ್ಕಾರ ಈ ಇದನ್ನು ಮುಂದುವರಿಸಬೇಕೆಂದು ಬಯಸುತ್ತಿದೆಯೇ? ಆರೋಪಗಳನ್ನು ಮಾಡಿದವರು ಮತ್ತು ಅವುಗಳನ್ನು ಬೆಂಬಲಿಸುವವರ ವಿರುದ್ಧ ತನಿಖೆ ನಡೆಸಬೇಕು. ವಿಧಾನಸಭೆಯಲ್ಲಿ ಮಧ್ಯಂತರ ವರದಿಯನ್ನು ಮಂಡಿಸುವಂತೆಯೂ ನಾವು ಸರ್ಕಾರವನ್ನು ಒತ್ತಾಯಿಸಿದ್ದೇವೆಂದು ಹೇಳಿದರು.
ಬಳಿಕ ಮಾತನಾಡಿದ ಸಿಟಿ ರವಿಯವರು, ಎಸ್‌ಐಟಿ ತನಿಖೆಗೆ ನಾವು ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ ತಪ್ಪು ಮಾಹಿತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳದಿರುವುದನ್ನು ಪ್ರಶ್ನಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಆರೋಪಗಳ ಹಿಂದೆ ಧಾರ್ಮಿಕ ಮತಾಂಧರು ಮತ್ತು ಮತಾಂತರ ಮಾಫಿಯಾ ಇದೆ. ಅನ್ನದಾಸೋಹ, ಅಕ್ಷರ ದಾಸೋಹ, ಆರೋಗ್ಯ ಸೇವೆಗಳು, ದೇವಾಲಯ ನವೀಕರಣ ಮತ್ತು ಸಾರ್ವಜನಿಕ ಕಲ್ಯಾಣವನ್ನು ಒದಗಿಸುವುದು ಅಪರಾಧವೇ? ಎಂದು ಪ್ರಶ್ನಿಸಿದರು.
ಸಾಕ್ಷಿ-ದೂರುದಾರರ ಹಿನ್ನೆಲೆ ಮತ್ತು ಪ್ರಕರಣದ ಮೇಲೆ ಪ್ರಭಾವ ಬೀರುವವರನ್ನು ಕೂಡ ಎಸ್‌ಐಟಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
Advertisement