
ಬೆಂಗಳೂರು: ನಕಲಿ ಮತದಾರರ ಕುರಿತ ಕಳವಳಗಳನ್ನು ಚುನಾವಣಾ ಆಯೋಗ ನಿರಾಕರಿಸಿರುವುದು ಆಘಾತಕಾರಿ ವಿಚಾರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮತಗಳ್ಳತನ ಆರೋಪ ಕುರಿತು ಚುನಾವಣಾ ಆಯೋಗ ನೀಡಿರುವ ಪ್ರತಿಕ್ರಿಯೆ ಕುರಿತು ಕಿಡಿಕಾರಿದ್ದಾರೆ.
ಭಾರತ ಚುನಾವಣಾ ಆಯೋಗ (ECI) ಕೊನೆಗೂ ಆರೋಪಗಳ ಕುರಿತು ಮಾತನಾಡಿದೆ. ಆದರೆ, ಈ ಹೇಳಿಕೆಗಳನ್ನು ಕರ್ತವ್ಯದಿಂದ ನೀಡಿಲ್ಲ. ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟ, ನಾಗರಿಕ ಸಮಾಜ ಮತ್ತು ಸುಪ್ರೀಂ ಕೋರ್ಟ್ ಒತ್ತಾಯಿಸಿದ್ದರಿಂದ ನೀಡಿದೆ. ಈ ಹೇಳಿಕೆ ಚುನಾವಣಾ ಆಯೋಗದ ಮುಖವಾಡವನ್ನು ಕಳಚುವಂತೆ ಮಾಡಿದೆ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗವು ನಿಷ್ಪಕ್ಷಪಾತ ರೆಫರಿಯಂತೆ ವರ್ತಿಸುವ ಬದಲು, ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವಂತೆ ತೋರುತ್ತಿದೆ. ನಿನ್ನೆಯ ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಆಯೋಗ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ಬದಲಿಗೆ ಅಫಿಡವಿಟ್ ಸಲ್ಲಿಸುವಂತೆ ತಿಳಿಸಿದೆ.
ಆಯೋಗದ ಪತ್ರಿಕಾಗೋಷ್ಟಿಯು ಅಹಂಕಾರದಿಂದ ಕೂಡಿತ್ತು. ಪ್ರಜಾಪ್ರಭುತ್ವವು ನಂಬಿಕೆಯ ಮೇಲೆ ಅವಲಂಬಿತವಾಗಿದೆ. ಚುನಾವಣಾ ಆಯೋಗವು ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ಯತ್ನದಲ್ಲಿ ವಿರೋಧ ಪಕ್ಷಗಳನ್ನು ಬೆದರಿಸುವ ಕೆಲಸ ಮಾಡುತ್ತಿದೆ. 45 ದಿನಗಳ ಅವಧಿಯಲ್ಲೇಕೆ ಯಾರೂ ಆಕ್ಷೇಪಣೆ ಎತ್ತಲಿಲ್ಲ ಎಂದು ಹೇಳಿ, ನಕಲಿ ಮತದಾರ ವಿಚಾರವನ್ನು ನಿರಾಕರಿಸುತ್ತಿದೆ. ಈ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಜವಾಬ್ದಾರಿಯುತ ಆಯೋಗವು ಮತದಾರರ ವ್ಯತ್ಯಾಸವನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ಪರಿಶೀಲಿಸಿ, ಸಾರ್ವಜನಿಕರಿಗೆ ವಿವರಿಸಬೇಕಿತ್ತು. ಆದರೆ, ಆರೋಪವನ್ನು ನಿರಾಕರಿಸುವ ಮೂಲಕ ಆಡಳಿತ ಪಕ್ಷದೊಂದಿಗೆ ಕೈಜೋಡಿಸುತ್ತಿದೆ ಎಂಬ ಅನುಮಾನವನ್ನು ಬಲಪಡಿಸಿದೆ. ಮಾಹಿತಿಗಳನ್ನು ಪಡೆಯಲು ಸಾಧ್ಯವಾಗದಂತೆ ಚುನಾವಣಾ ಆಯೋಗ ಮಾಡಿದ ಕಾರಣ ಅಕ್ರಮ ಬಹಿರಂಗಪಡಿಸಲು ಕಾಂಗ್ರೆಸ್ ಸಮಯ ತೆಗೆದುಕೊಂಡಿತು. ಬೆಂಗಳೂರಿನ ಒಂದು ಕ್ಷೇತ್ರದಲ್ಲೇ ಸಾವಿರಾರು ಪುಟಗಳ ಮಾಹಿತಿಯನ್ನು ಪರಿಶೀಲಿಸಬೇಕಾಯಿತು. ಒಂದು ಕ್ಷೇತ್ರದ ಪರಿಸ್ಥಿತಿ ಹೀಗಿದ್ದರೆ, ಇಡೀ ದೇಶದ ಪ್ರಮಾಣವನ್ನು ಊಹಿಸಿ. ಪ್ರತಿಯೊಂದು ಮತದ ಸಮಗ್ರತೆಯನ್ನು ರಕ್ಷಿಸುವುದು ಚುನಾವಣಾ ಆಯೋಗ ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪೋಸ್ಟ್ ಮಾಡಿ, ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥರಾಗಿದ್ದರೂ ಬಿಜೆಪಿಯ ಏಜೆಂಟ್‌ರಂತೆ ವರ್ತಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಆ ಹುದ್ದೆಯಲ್ಲಿ ಮುಂದುವರೆಯಲು ಅರ್ಹರಲ್ಲ. ಜ್ಞಾನೇಶ್ ಕುಮಾರ್ ನಿವೃತ್ತಿಯ ನಂತರ ಬಿಜೆಪಿ ಸೇರುವ ಬದಲು ಈ ಕೂಡಲೆ CEC ಹುದ್ದೆ ತ್ಯಜಿಸಿ ಅಧಿಕೃತವಾಗಿ ಬಿಜೆಪಿ ಸೇರಿಕೊಳ್ಳಲಿ. ಆಗಲಾದರೂ ಆಯೋಗದ ವಿಶ್ವಾಸಾರ್ಹತೆ ಉಳಿಯಬಹುದು ಎಂದು ಹೇಳಇದ್ದಾರೆ.
ಚುನಾವಣಾ ಆಯೋಗ ನಡೆಸಿರುವ ಮತಗಳವನ್ನು ರಾಹುಲ್ ಗಾಂಧಿ ದಾಖಲೆಗಳ ಸಮೇತ ದೇಶದ ಜನರ ಮುಂದಿಟ್ಟಿದ್ದಾರೆ. ಆದರೂ ಆಯೋಗದ ಮುಖ್ಯ ಆಯುಕ್ತರು ಮತಗಳವಿನ ಬಗ್ಗೆ 7 ದಿನಗಳ ಒಳಗೆ ದಾಖಲೆ ಕೊಡಿ ಎಂದು ನೋಟಿಸ್ ನೀಡಿರುವುದು ನಗೆಪಾಟಲಿನ ವಿಚಾರ. ಆಯೋಗ ನೀಡಿದ ದಾಖಲೆಯ ಆಧಾರದಲ್ಲೆ ಮತಗಳವು ಪತ್ತೆ ಮಾಡಲಾಗಿದೆ. ಹೀಗಿದ್ದರೂ ಮುಖ್ಯ ಚುನಾವಣಾ ಆಯುಕ್ತರು ಲಜ್ಜೆ ಬಿಟ್ಟು ಸಮರ್ಥನೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ.
Advertisement