
ಬೆಂಗಳೂರು: ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಗಳಿಗಾಗಿ ಪರಿವರ್ತಿಸಲು ಅವಕಾಶ ನೀಡುವ ಕರ್ನಾಟಕ ಭೂ ಸುಧಾರಣಾ ಮತ್ತು ಇತರ ಕೆಲವು ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಸೋಮವಾರ ವಿಧಾನ ಪರಿಷತ್ತಿನಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಮಸೂದೆಯನ್ನು ಮಂಡಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಎರಡು ಎಕರೆವರೆಗಿನ ಕೃಷಿ ಭೂಮಿಯಲ್ಲಿ ಎಂಎಸ್‌ಎಂಇ ಘಟಕಗಳನ್ನು ಸ್ಥಾಪಿಸಬೇಕಾದರೆ, ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಮಸೂದೆಯು ಪರಿವರ್ತನೆ ಷರತ್ತನ್ನು ತೆಗೆದುಹಾಕುವುದರಿಂದ ಅದು ಸ್ವಯಂಚಾಲಿತವಾಗಿ ಪರಿವರ್ತನೆಯಾಗುತ್ತದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಎಲ್ಲೇ ಆಗಲಿ 2 ಎಕರೆ ವರೆಗೆ ಕೈಗಾರಿಗೆ ಮಾಡಲು ಪರಿವರ್ತನೆಗೆ ವಿನಾಯಿತಿ ನೀಡಲಾಗುತ್ತದೆ. ಸಣ್ಣ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ತಿದ್ದುಪಡಿ ತರಲಾಗಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದ ಉತ್ತೇಜನಕ್ಕಾಗಿ ಸೋಲಾರ್, ಪವನ ಶಕ್ತಿ ಘಟಕ ಸ್ಥಾಪಿಸಲು ಅನುಮತಿ ಕೊಡಿಸುವ ನೆಪದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಹಾಗಾಗಿ ಇಂತಹ ಘಟಕಗಳ ಸ್ಥಾಪನೆಗೂ ಭೂ ಪರಿವರ್ತನೆ ಅಗತ್ಯವಿಲ್ಲ ಎಂಬ ಅವಕಾಶವನ್ನು ಈ ತಿದ್ದುಪಡಿಯಲ್ಲಿ ತರಲಾಗಿದೆ ಎಂದು ವಿವರಿಸಿದರು.
ಸಚಿವರೆಲ್ಲಿ?
ಈ ನಡುವೆ ಸದನದಲ್ಲಿ ಸಚಿವರು ಗೈರು ಹಾಜರಿಗೆ ವಿರೋಧ ಪಕ್ಷದ ಸದಸ್ಯರು ತೀವ್ರವಾಗಿ ಕಿಡಿಕಾರಿದರು. ಇದು ತೀವ್ರ ಗದ್ದಲವನ್ನು ಸೃಷ್ಟಿಸಿತ್ತು.
ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಆಡಳಿತ ಪಕ್ಷಕ್ಕೆ ಅಧಿವೇಶನಕ್ಕೆ ಹಾಜರಾಗಿ, ವಿರೋಧ ಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುವಂತೆ ಸೂಚನೆ ನೀಡಿ, ಸದನವನ್ನು ಮುಂದೂಡಿದರು.
ಶಿಕ್ಷಕರ ನೇಮಕಾತಿ
ಎಸ್‌ಸಿಗಳಿಗೆ ಆಂತರಿಕ ಮೀಸಲಾತಿ ಅಂತಿಮಗೊಂಡ ನಂತರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 46,000 ಸರ್ಕಾರಿ ಶಾಲೆಗಳಲ್ಲಿ 21,000 ಶಿಥಿಲಾವಸ್ಥೆಯಲ್ಲಿವೆ ಮತ್ತು 61,000 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಉತ್ತರಿಸಿದರು.
ಎಸ್‌ಸಿಗಳಿಗೆ ಆಂತರಿಕ ಮೀಸಲಾತಿ ಅಂತಿಮಗೊಂಡ ನಂತರ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು. ನಾಲ್ಕು ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
Advertisement