
ಬೆಂಗಳೂರು: ಕನ್ನಡ ಚಿತ್ರ ನಿರ್ದೇಶಕ ಪ್ರೇಮ್ ಎಮ್ಮೆ ಖರೀದಿಸಲು ಹೋಗಿ ಮೋಸಗೊಂಡು ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ಅವರಿಗೆ ಹೈನುಗಾರಿಕೆಗಾಗಿ ಎಮ್ಮೆ ಕೊಡಿಸುವುದಾಗಿ 4.5 ಲಕ್ಷ ರೂಪಾಯಿ ಪಡೆದು ವಂಚಿಸಿರುವ ಆರೋಪದ ಮೇಲೆ ಗುಜರಾತ್ ಮೂಲದ ವನರಾಜ್ ಭಾಯ್ ಎಂಬಾತನ ವಿರುದ್ಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೇಮ್ ಅವರ ಮ್ಯಾನೇಜರ್ ಕಂ ನಟ ದಶಾವರ ಚಂದ್ರು ಅವರು ದೂರು ನೀಡಿದ್ದಾರೆ.
ಏನಿದು ಪ್ರಕರಣ
ಪ್ರೇಮ್ ಅವರು ತಮ್ಮ ಹೈನುಗಾರಿಕೆಗಾಗಿ ಎರಡು ಎಮ್ಮೆಗಳನ್ನು ಖರೀದಿಸಲು ಮುಂದಾಗಿದ್ದರು. ಈ ವೇಳೆ ವನರಾಜ್ ಭಾಯ್ ಎಂಬ ವ್ಯಕ್ತಿಯನ್ನು ಸಂಪರ್ಕಿಸಿ, ಎಮ್ಮೆಗಳನ್ನು ಕೊಡಿಸುವುದಾಗಿ ಭರವಸೆ ನೀಡಿದ್ದ. ಮುಂಗಡವಾಗಿ 25,000 ರೂಪಾಯಿ ಪಡೆದು ಆತ ವಾಟ್ಸಾಪ್ ಮೂಲಕ ಎರಡು ಎಮ್ಮೆಗಳ ವಿಡಿಯೋ ಕಳುಹಿಸಿದ್ದ.
ಇದನ್ನು ನಂಬಿದ ಪ್ರೇಮ್ ಅವರು ಹಂತ ಹಂತವಾಗಿ ಆನ್‌ಲೈನ್ ಮೂಲಕ ಒಟ್ಟು 4.5 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದರು. ಆದರೆ, ಹಣ ಪಡೆದ ನಂತರ ವನರಾಜ್ ಭಾಯ್ ಎಮ್ಮೆಗಳನ್ನು ನೀಡದೇ ಹಣದೊಂದಿಗೆ ನಾಪತ್ತೆಯಾಗಿದ್ದಾನೆ. ಒಂದು ವಾರದಲ್ಲಿ ಎಮ್ಮೆಗಳನ್ನು ನೀಡುತ್ತೇನೆ ಎಂದಿದ್ದ ವನರಾಜ್ ಭಾಯ್ ಹಣದೊಂದಿಗೆ ಎಸ್ಕೇಪ್ ಆಗಿದ್ದಾನೆ. ಈಗ ಆತನ ಫೋನ್ ಸ್ವಿಚ್ ಆಫ್ ಆಗಿದ್ದು, ವಂಚನೆಗೊಳಗಾಗಿದ್ದೇನೆ ಎಂದು ಅರಿತ ಪ್ರೇಮ್ ದೂರು ದಾಖಲಿಸಿದ್ದಾರೆ.
ಅಮ್ಮನ ನೆನಪಿಗೆ ಎಮ್ಮೆ ಖರೀದಿಸಲು ಮುಂದಾಗಿದ್ದ ಪ್ರೇಮ್
ಜೋಗಿ ಪ್ರೇಮ್ ತಮ್ಮ ತಾಯಿ ಭಾಗ್ಯಮ್ಮ ನಿಧನದ ಬಳಿಕ, ಅವರ ಮೇಲಿನ ಅತೀವ ಪ್ರೀತಿ ಮತ್ತು ಗೌರವದಿಂದ ಮದ್ದೂರು ಬಳಿಯ ಬೆಸಗರಹಳ್ಳಿಯಲ್ಲಿ ಹತ್ತು ಎಕರೆಗೂ ಹೆಚ್ಚು ಕೃಷಿ ಜಮೀನು ಖರೀದಿಸಿ, ಅದಕ್ಕೆ ‘ಅಮ್ಮನ ತೋಟ’ ಎಂದು ಹೆಸರಿಟ್ಟಿದ್ದಾರೆ. ಗುಜರಾತ್ ಎಮ್ಮೆಯನ್ನು ಖರೀದಿಸಿ ಅದನ್ನು ಅಮ್ಮನ ತೋಟದಲ್ಲಿ ಸಾಕುವ ಆಸೆ ಹೊಂದಿದ್ದರು.
ಈಗಾಗಲೇ ಹಲವು ದೇಶಿ ತಳಿಯ ಹಸುಗಳನ್ನು ತಂದು ಸಾಕುತ್ತಿದ್ದು, ಇತ್ತೀಚೆಗೆ ಹರಿಯಾಣದ ಕಾಮಧೇನು ಗೋಶಾಲೆಗೆ ಭೇಟಿ ನೀಡಿ ಸಾಯಿವಾಲ್ ತಳಿಯ ಹಸುಗಳನ್ನು ಮತ್ತು ‘ಭೈರವ’ ಎಂದು ಹೆಸರಿಟ್ಟ ಕಪ್ಪು ಹೋರಿಯೊಂದನ್ನು ಖರೀದಿಸಿದ್ದರು. ಇದೀಗ ಎಮ್ಮೆ ಖರೀದಿಸಲು ಹೋಗಿ ಮೋಸ ಹೋಗಿದ್ದಾರೆ.
Advertisement