ಧರ್ಮಸ್ಥಳ ಪ್ರಕರಣಕ್ಕೆ 'ಟ್ವಿಸ್ಟ್ ಮೇಲೆ ಟ್ವಿಸ್ಟ್' ​; ಮಾಸ್ಕ್‌ಮ್ಯಾನ್ ಸ್ನೇಹಿತ ಹೇಳಿದ್ದು ಏನು?

ಮಾಸ್ಕ್ ಮ್ಯಾನ್ ಹೇಳಿದಂತೆ ಧರ್ಮಸ್ಥಳದ ಬಳಿ ನೂರಾರು, ಸಾವಿರಾರು ಶವಗಳನ್ನು ಹೂತು ಹಾಕಿಲ್ಲ. ಆತ ಹಣಕ್ಕಾಗಿ ಈ ರೀತಿಯ ಸುಳ್ಳು ಆರೋಪ ಮಾಡಿರುವ ಸಾಧ್ಯತೆಯಿದೆ.
Masked Man and His Friend Raju
ಮಾಸ್ಕ್ ಮ್ಯಾನ್ ಹಾಗೂ ಆತನ ಸ್ನೇಹಿತ ರಾಜು
Updated on

ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ದಿನದಿಂದ ದಿನಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗ್ತಾ ಇದೆ. ನೇತ್ರಾವತಿ ನದಿ ದಡದಲ್ಲಿ ನೂರಾರು ಮಹಿಳೆಯರು, ಯುವತಿಯರ ಶವಗಳನ್ನು ಹೂತು ಹಾಕಿದ್ದೇನೆ ಎಂಬ ಅನಾಮಿಕನ ಕುರಿತು ಆತನ ಜೊತೆಗೆ ಕೆಲಸ ಮಾಡಿದ್ದ ಸ್ನೇಹಿತ ನೀಡಿರುವ ಹೇಳಿಕೆಯೂ ಸಾಕಷ್ಟು ಕುತೂಹಲ ಮೂಡಿಸಿದೆ.

ಹೌದು. ಮಾಸ್ಕ್ ಮ್ಯಾನ್ ಹೇಳಿದಂತೆ ಧರ್ಮಸ್ಥಳದ ಬಳಿ ನೂರಾರು, ಸಾವಿರಾರು ಶವಗಳನ್ನು ಹೂತು ಹಾಕಿಲ್ಲ. ಆತ ಹಣಕ್ಕಾಗಿ ಈ ರೀತಿಯ ಸುಳ್ಳು ಆರೋಪ ಮಾಡಿರುವ ಸಾಧ್ಯತೆಯಿದೆ ಎಂದು ಈ ಹಿಂದೆ ಮಾಸ್ಕ್ ಮ್ಯಾನ್ ಜೊತೆಗೆ ದೇವಸ್ಥಾನದಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಮಂಡ್ಯ ಮೂಲದ ರಾಜು ಹೇಳಿದ್ದಾರೆ.

ಧರ್ಮಸ್ಥಳದಲ್ಲಿ‌ 10 ವರ್ಷಗಳ ಹಿಂದೆ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ನಮಗೆ ಮಾಹಿತಿ ಕಚೇರಿಯಿಂದ ವಿಷಯ ತಿಳಿಸಲಾಗಿತ್ತು. ಆಗ ನಾವು ಹೆಣಗಳನ್ನು ಎತ್ತಿ ದಡಕ್ಕೆ ತರುತ್ತಿದ್ದೆವು. ನಂತರ ಅದನ್ನು ಅಂಬುಲೆನ್ಸ್‌ ಮೂಲಕ ಬೆಳ್ತಂಗಡಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿಸಿದ್ದಾರೆ.

ನೂರಾರು ಶವಗಳನ್ನು ಹೂತಿದ್ದೇನೆ ಎನ್ನುವುದು ಸುಳ್ಳು. ಅಷ್ಟೊಂದು ಶವ ಹೂತಿದ್ದರೆ ಮೂಳೆಗಳಾದ್ರೂ ಸಿಗಬೇಕಿತ್ತು. ಜೆಸಿಬಿ ತಂದರೂ ಮೂಳೆ ಸಿಕ್ಕಿಲ್ಲ. ಕೆಲಸ ಕೊಟ್ಟ ಯಜಮಾನರ ಮೇಲೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಇದು ಬಹಳ ತಪ್ಪು ಎಂದು ಹೇಳಿದರು. ಮೊದಲು ಇಲ್ಲಿ ನನ್ನ ಅತ್ತೆ, ಮಾವ ಸಚ್ಛತಾ ಕೆಲಸ ಮಾಡುತ್ತಿದ್ದರು. ನಂತರ ಅವರಿಗೆ ಹುಷಾರಿಲ್ಲದ ಕಾರಣ ನಾನು ಹೋಗಿದ್ದೆ. ಈ ಸಂದರ್ಭದಲ್ಲಿ ನಮ್ಮ ಕುಟುಂಬ ಮತ್ತು ಮಾಸ್ಕ್‌ ಮ್ಯಾನ್‌ ಕುಟುಂಬ ಅಕ್ಕಪಕ್ಕದ ಮನೆಯಲ್ಲಿ ನೆಲೆಸಿದ್ದೇವು ಎಂದು ತಿಳಿಸಿದ್ದಾರೆ.

ದೇವಸ್ಥಾನ, ನೇತ್ರಾವತಿ ಸ್ನಾನಘಟ್ಟ, ಬಾಹುಬಲಿ ಬೆಟ್ಟದಲ್ಲಿ ಕೆಲಸ ಮಾಡಿದ್ದೇನೆ. ಮೂರು ತಿಂಗಳಿಗೊಮ್ಮೆ ಕೆಲಸದ ಸ್ಥಳ ಬದಲಾವಣೆ ಆಗುತ್ತಿತ್ತು. ಮಾಹಿತಿ ಕಚೇರಿಯಿಂದ ಬರುತ್ತಿದ್ದ ಸೂಚನೆಯ ಮೇರೆಗೆ ಕೆಲಸ ಮಾಡುತ್ತಿದ್ದೆವು. ಮಕ್ಕಳು ನಾಪತ್ತೆಯಾಗಿದ್ದರೆ ಮೈಕ್‌ ಮೂಲಕ ಪ್ರಕಟಣೆ ಹೊರಡಿಸಲಾಗುತ್ತಿತ್ತು. ಮಾಹಿತಿ ಕಚೇರಿ ಮತ್ತು ನೇತ್ರಾವತಿ ಬಳಿ ಪ್ರಕಟಣೆಯಾಗುತ್ತಿತ್ತು. ಮಕ್ಕಳು ಸಿಕ್ಕಿದರೆ ಮಾಹಿತಿ ಕಚೇರಿಗೆ ಬಿಡುತ್ತಿದ್ದರು. ನಂತರ ಪೋಷಕರ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅವರಿಗೆ ಮಕ್ಕಳನ್ನು ಅವರಿಗೆ ಹಸ್ತಾಂತರ ಮಾಡಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

ನಾನು ಕೆಲಸ ಮಾಡಿದ್ದ ನಾಲ್ಕು ವರ್ಷಗಳ ಅವಧಿಯಲ್ಲಿ ನೇತ್ರಾವತಿ ಬಳಿ ಎರಡು ಶವ ಸಿಕ್ಕಿತ್ತು. ಪುರುಷ ಮತ್ತು ಮಹಿಳೆಯ ಶವ ಸಿಕ್ಕಿತ್ತು. ಸಿಕ್ಕಿದ ಶವಗಳನ್ನು ಹೂಳುತ್ತಿರಲಿಲ್ಲ. ಅಂಬುಲೆನ್ಸ್‌ ಬರುತ್ತಿತ್ತು. ವೈದ್ಯರು, ಪೊಲೀಸರು ಬರುತ್ತಿದ್ದರು. ನಂತರ ಆ ಮೃತದೇಹವನ್ನು ಬೆಳ್ತಂಗಡಿಗೆ ಕಳುಹಿಸಲಾಗುತ್ತಿತ್ತು. ನೂರಾರು ಶವ ಸಿಕ್ಕಿದೆ ಎನ್ನುವುದು ಸುಳ್ಳು ಎಂದು ಅವರು ಹೇಳಿದರು.

Masked Man and His Friend Raju
ವೀರೇಂದ್ರ ಹೆಗ್ಗಡೆ ಸಂದರ್ಶನ: ಧರ್ಮಸ್ಥಳದಲ್ಲಿ ಸರಣಿ ಕೊಲೆ ಆರೋಪ 'ಆಧಾರ ರಹಿತ'; SIT ಮಾಡಿದ್ದು ಒಳ್ಳೆಯದು..

ಒಟ್ಟು ನಾಲ್ಕು ಕುಟುಂಬಗಳು ಸ್ವಚ್ಛತಾ ಕೆಲಸ ಮಾಡುತ್ತಿದ್ದವು. ಮಾಹಿತಿ ಕಚೇರಿ ಬಿಟ್ಟರೆ ಬೇರೆ ಯಾರೂ ನಮಗೆ ಆ ಕೆಲಸ ಮಾಡು, ಈ ಕೆಲಸ ಮಾಡು ಎಂದು ಹೇಳುತ್ತಿರಲಿಲ್ಲ. ನಮ್ಮ ಜೊತೆ ಕೆಲಸ ಮಾಡುವಾಗ ಅನಾಮಿಕ ಚೆನ್ನಾಗಿಯೇ ಇದ್ದ. ನಾವು ಬರುವ ಮೊದಲೇ ಅವರ ಕುಟುಂಬ ಅಲ್ಲಿ ನೆಲೆಸಿತ್ತು. ನಾನು ಕೆಲಸ ಬಿಟ್ಟು ಬಂದ ನಂತರವೂ ಆತ ಅಲ್ಲಿ ಕೆಲಸ ಮಾಡುತ್ತಿದ್ದ. ಆತ ಶವದಿಂದ ಚಿನ್ನ ಕದಿಯುತ್ತಿದ್ದ ವಿಚಾರ ನನಗೆ ಗೊತ್ತಿಲ್ಲ. ನಾನು ಬಿಟ್ಟ ಬಂದ ನಂತರ ಆತ ಯಾಕೆ ಕೆಲಸ ಬಿಟ್ಟ ಅನ್ನೋದು ಗೊತ್ತಿಲ್ಲ. ನನ್ನನ್ನು ಎಸ್ ಐಟಿಯವರು ವಿಚಾರಣೆ ನಡೆಸಿದ್ದಾರೆ. ಮುಂದೆ ಕೋರ್ಟ್‌ನಲ್ಲಿ ಕೇಳಿದ್ರು ಇದನ್ನೇ ಹೇಳ್ತೀನಿ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com