
ಬೆಂಗಳೂರು: ಅರಣ್ಯದೊಳಗೆ ಅತಿಕ್ರಮ ಪ್ರವೇಶ ಮಾಡಿ, ಶವಗಳನ್ನು ಹೂತಿರುವುದು ಎಸ್‍ಐಟಿ ತನಿಖೆಯಿಂದ ಸಾಬೀತಾದರೆ, ಅರಣ್ಯ ಸಂರಕ್ಷಣಾ ಕಾಯಿದೆಯ ಅನ್ವಯ ಕ್ರಮ ಜರುಗಿಸಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ಅವರು ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲು ಅರಣ್ಯದಲ್ಲಿ ಯಾವುದೇ ಅರಣ್ಯೇತರ ಚಟುವಟಿಕೆ ನಡೆಸಲು ಅವಕಾಶ ಇಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಅಥವಾ ಸಾರ್ವಜನಿಕ ಉದ್ದೇಶಕ್ಕೆ ಅರಣ್ಯ ಭೂಮಿ ಬಳಕೆ ಮಾಡಬೇಕಾದಲ್ಲಿ ನಿಯಮಾನುಸಾರ ತೀರುವಳಿ ಅನುಮತಿ(ಎಫ್‍ಸಿ) ಪಡೆಯಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶವ ಸಂಸ್ಕಾರ ಮಾಡಿರುವುದು ಈಗ ನಡೆಯುತ್ತಿರುವ ವಿಶೇಷ ತನಿಖಾ ತಂಡದ (ಎಸ್‍ಐಟಿ) ತನಿಖೆಯಿಂದ ಸಾಬೀತಾದರೆ ನಿಯಮಾನುಸಾರ ಕಾನೂನು ರೀತಿಯಲ್ಲಿ ಕ್ರಮ ಆಗುತ್ತದೆ ಎಂದು ತಿಳಿಸಿದರು.
ಏತನ್ಮಧ್ಯೆ ಸಚಿವ ಈಶ್ವರ್ ಖಂಡ್ರೆಯವರು ಕರ್ನಾಟಕ ರಾಜ್ಯ ಕೈಗಾರಿಕಾ ನಿಗಮ ನಿಯಮಿತ (ಕೆ.ಎಸ್.ಎಫ್. ಐ.ಸಿ.)ದ ಇ-ಕಾಮರ್ಸ್ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕಂಪನಿಗಳ ಕಾಯಿದೆ ಅಡಿ 1973ರಲ್ಲಿ ಸ್ಥಾಪನೆಯಾದ ಕೆಎಸ್ಎಫ್ಐಸಿ ಗುಣಮಟ್ಟದ ಪೀಠೋಪಕರಣ, ಬಾಗಿಲು, ಬಾಗಿಲವಾಡ, ಕಟಕಿ ಇತ್ಯಾದಿಗಳನ್ನು ಸಿದ್ಧಪಡಿಸಿ ಸರ್ಕಾರಿ ಕಟ್ಟಡ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುವ ನಿಗಮ ಈಗ ಇಂದಿನ ಯುಗಮಾನದ ಅಗತ್ಯಕ್ಕೆ ಅನುಗುಣವಾಗಿ ಇ-ಕಾಮರ್ಸ್ ಅಂತರ್ಜಾಲ ತಾಣ ಸಿದ್ಧಪಡಿಸಿದ್ದು, ಇದನ್ನು ನಿಗಮದ ಅಧ್ಯಕ್ಷ ಹಾಗೂ ಶಾಸಕ ಗೋಪಾಲಕೃಷ್ಣ ಬೇಲೂರು ಅವರ ಸಮ್ಮುಖದಲ್ಲಿ ಉದ್ಘಾಟಿಸಲು ಹರ್ಷಿಸುತ್ತೇನೆ ಎಂದು ಹೇಳಿದರು.
Advertisement