
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಮಹಿಳೆಯರು, ಯುವತಿಯರು ಸೇರಿದಂತೆ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿಕೊಂಡು ಬಂದಿದ್ದ ಅನಾಮಿಕ ದೂರುದಾರ ಸಿ ಎನ್ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು ವಿಶೇಷ ತನಿಖಾ ದಳ( SIT)ಅಧಿಕಾರಿಗಳು ಬಂಧಿಸಿರುವುದನ್ನು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸ್ವಾಗತಿಸಿದ್ದಾರೆ.
ಅನಾಮಿಕ ದೂರುದಾರನನ್ನು ಬೆಳ್ತಂಗಡಿ ಕೋರ್ಟ್ ನಲ್ಲಿ ನ್ಯಾಯಾಧೀಶರ ಮುಂದೆ ಎಸ್ ಐಟಿ ಅಧಿಕಾರಿಗಳು ಹಾಜರುಪಡಿಸಿದ ನಂತರ ಮಾತನಾಡಿದ ವಿರೇಂದ್ರ ಹೆಗ್ಗಡೆ ಅವರು, ಈಗ ಒಂದೊಂದೇ ಸತ್ಯಗಳು ಹೊರಗೆ ಬರ್ತಾ ಇದೆ. ಸತ್ಯಗಳನ್ನು ತೊಳೆದು ಇಟ್ಟಂತಾಗಿದೆ ಎಂದು ಹೇಳಿದ್ದಾರೆ.
ಧರ್ಮಸ್ಥಳದ ವಿರುದ್ಧ ಆಧಾರವಿಲ್ಲದ ಆರೋಪ ಮಾಡಲಾಗುತ್ತಿದೆ. ಇದರಿಂದ ದೊಡ್ಡ ಪ್ರಮಾಣದ ಭಕ್ತರು ಮತ್ತು ಸಮುದಾಯದಲ್ಲಿ ಕಳವಳ ಉಂಟಾಗಿದೆ. ಇದೀಗ ದೂರುದಾರ ಬಂಧನದಿಂದ ಸತ್ಯಾಂಶ ಹೊರ ಬಂದು, ನ್ಯಾಯ ಸಿಗುವ ನಂಬಿಕೆ ಇದೆ ಎಂದಿದ್ದಾರೆ.
ಈ ಹೇಳಿಕೆಯ ಮೂಲಕ ವಿಶೇಷ ತನಿಖಾ ದಳದ (SIT) ತನಿಖೆಯಲ್ಲಿ ಆರೋಪಗಳ ದುರುದ್ದೇಶಪೂರಿತ ಸ್ವರೂಪ ಬಯಲಾಗುತ್ತಿದೆ ಎಂದು ಸೂಚಿಸಿದ್ದಾರೆ. ಧರ್ಮಸ್ಥಳಕ್ಕೆ ಬಂದು ಬೆಂಬಲ ಸೂಚಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದಿದ್ದಾರೆ. ಅಲ್ಲದೇ ತನಿಖೆಯ ಹಂತದಲ್ಲಿ ಹೆಚ್ಚಿನದನ್ನು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ಮಾಜಿ ನೈರ್ಮಲ್ಯ ಕೆಲಸಗಾರನಾಗಿದ್ದ ದೂರುದಾರನು ನೀಡಿದ ಹೇಳಿಕೆಗಳು ಮತ್ತು ದಾಖಲೆಗಳಲ್ಲಿ ಅಸಂಗತತೆ ಕಂಡುಬಂದ ನಂತರ ಸುಳ್ಳು ಸಾಕ್ಷ್ಯ ನುಡಿದ ಆರೋಪದ ಮೇಲೆ ಆತನನ್ನು ಶನಿವಾರ ಬಂಧಿಸಿದ್ದು, ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಇಲ್ಲಿಯವರೆಗೆ ಮುಖವಾಡ ಧರಿಸಿ ಸಮಿತಿಯ ಮುಂದೆ ಹಾಜರಾದ ದೂರುದಾರನನ್ನು ಸಿ ಎನ್ ಚಿನ್ನಯ್ಯ ಎಂದು ಗುರುತಿಸಲಾಗಿದೆ. ಹಲವಾರು ಗಂಟೆಗಳ ವಿಚಾರಣೆಯ ನಂತರ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರನ್ನು ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ವಿಜಯೇಂದ್ರ ಅವರ ಮುಂದೆ ಹಾಜರುಪಡಿಸಲಾಯಿತು ಮತ್ತು ಹೆಚ್ಚಿನ ತನಿಖೆಗಾಗಿ ಎಸ್‌ಐಟಿ 10 ದಿನಗಳ ಕಸ್ಟಡಿಗೆ ಕೋರಿತು. ನ್ಯಾಯಾಲಯವು ವಿನಂತಿಯನ್ನು ಪುರಸ್ಕರಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement