
ಮಂಗಳೂರು: ಕಳೆದ ಎರಡು ದಶಕಗಳ ಅವಧಿಯಲ್ಲಿ ಧರ್ಮಸ್ಥಳ ಸುತ್ತಮುತ್ತ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಹೇಳಿಕೊಂಡು ಬಂದಿದ್ದ ಅನಾಮಿಕ ದೂರುದಾರ ಸಿ ಎನ್ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು 10 ದಿನಗಳ ಕಾಲ ವಿಶೇಷ ತನಿಖಾ ತಂಡದ (SIT) ಕಸ್ಟಡಿಗೆ ಒಪ್ಪಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನ್ಯಾಯಾಲಯ ಇಂದು ಶನಿವಾರ ಆದೇಶ ಹೊರಡಿಸಿದೆ.
ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ಮಾಜಿ ನೈರ್ಮಲ್ಯ ಕೆಲಸಗಾರನಾಗಿದ್ದ ದೂರುದಾರನು ನೀಡಿದ ಹೇಳಿಕೆಗಳು ಮತ್ತು ದಾಖಲೆಗಳಲ್ಲಿ ಅಸಂಗತತೆ ಕಂಡುಬಂದ ನಂತರ ಸುಳ್ಳು ಸಾಕ್ಷ್ಯ ನುಡಿದ ಆರೋಪದ ಮೇಲೆ ಬಂಧಿಸಲಾಯಿತು. ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದ ಪೊಲೀಸ್ ಮಾಹಿತಿಯ ಪ್ರಕಾರ, ಇಲ್ಲಿಯವರೆಗೆ ಮುಖವಾಡ ಧರಿಸಿ ಸಮಿತಿಯ ಮುಂದೆ ಹಾಜರಾದ ದೂರುದಾರನನ್ನು ಸಿ ಎನ್ ಚಿನ್ನಯ್ಯ ಎಂದು ಗುರುತಿಸಲಾಗಿದೆ.
ಹಲವಾರು ಗಂಟೆಗಳ ವಿಚಾರಣೆಯ ನಂತರ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರನ್ನು ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ವಿಜಯೇಂದ್ರ ಅವರ ಮುಂದೆ ಹಾಜರುಪಡಿಸಲಾಯಿತು ಮತ್ತು ಹೆಚ್ಚಿನ ತನಿಖೆಗಾಗಿ ಎಸ್‌ಐಟಿ 10 ದಿನಗಳ ಕಸ್ಟಡಿಗೆ ಕೋರಿತು. ನ್ಯಾಯಾಲಯವು ವಿನಂತಿಯನ್ನು ಪುರಸ್ಕರಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಚಿನ್ನಯ್ಯನನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲು ಬೆಳ್ತಂಗಡಿಯ ಎಸ್ ಐಟಿ ಕಚೇರಿಗೆ ಕರೆತಂದಿದ್ದರು. ಧರ್ಮಸ್ಥಳ, ಉಜಿರೆ, ಚಿನ್ನಯ್ಯನನ್ನು ಬೆಳ್ತಂಗಡಿ ಸುತ್ತಮುತ್ತ ಹಲವು ಕಡೆ ಕರೆದೊಯ್ದು ಸ್ಥಳ ಮಹಜರು ಕೂಡ ಮಾಡುವ ಸಾಧ್ಯತೆ ಇದೆ. ಆತ ಬುರುಡೆ ತಂದ ಜಾಗಕ್ಕೂ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.
ಅಧಿಕಾರಿಗಳಿಂದ ತೀವ್ರ ತನಿಖೆ
ಚಿನ್ನಯ್ಯ ಇದ್ದಕ್ಕಿದ್ದಂತೆ ಬುರುಡೆ ಕಥೆ ಹೆಣೆಯಲು ಕಾರಣವೇನು ಆತನ ಹಿಂದೆ ಯಾರ್ಯಾರು ಇದ್ದಾರೆ ಎಂದು ವಿವರವಾಗಿ ತನಿಖೆ ನಡೆಸುವ ಅವಶ್ಯಕತೆ ಇದೆ. ಹೀಗಾಗಿ ಚಿನ್ನಯ್ಯನನ್ನು ವಶಕ್ಕೆ ನೀಡಬೇಕು ಎಂದು ಎಸ್‌ಐಟಿ ಪರ ವಕೀಲರು ವಾದ ಮಂಡಿಸಿದ್ದರು.
ಇದನ್ನು ಪುರಸ್ಕರಿಸಿದ ನ್ಯಾಯಾಲಯ, ಎಸ್‌ಐಟಿ ವಶಕ್ಕೆ ಒಪ್ಪಿಸಿ ಆದೇಶ ನೀಡಿದೆ. ಕಳೆದ ಎರಡು ದಶಕಗಳ ಅವಧಿಯಲ್ಲಿ ಧರ್ಮಸ್ಥಳದಲ್ಲಿ ಹಲವಾರು ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದು ಶವಗಳನ್ನು ಸಮಾಧಿ ಮಾಡಲಾಗಿದೆ ಎಂದು ಆರೋಪಿಸಿದ್ದ ದೂರುದಾರ ಚಿನ್ನಯ್ಯ ಆಗಿದ್ದಾನೆ.
ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ಮಾಜಿ ನೈರ್ಮಲ್ಯ ಕೆಲಸಗಾರನಾಗಿದ್ದೆ ಎಂದು ಹೇಳಿಕೊಳ್ಳುವ ಚಿನ್ನಯ್ಯ ನೀಡಿದ ಹೇಳಿಕೆಗಳು ಮತ್ತು ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
Advertisement