
ಮಂಗಳೂರು: ಧರ್ಮಸ್ಥಳದಲ್ಲಿ 2003ರಲ್ಲಿ ಅನನ್ಯಾ ಭಟ್ ಎಂಬ ನನ್ನ ಮಗಳು ನಾಪತ್ತೆಯಾಗಿ ತೀರಿಹೋಗಿದ್ದಳು, ಅವಳ ಅಸ್ಥಿಪಂಜರ ಹುಡುಕಿಕೊಡಿ ಎಂದು ಪೊಲೀಸರಿಗೆ ದೂರು ನೀಡಿ ನಿನ್ನೆ ಯೂಟ್ಯೂಬ್ ಚಾನೆಲ್ ವೊಂದರ ಮುಂದೆ ಸಂದರ್ಶನ ನೀಡಿ ಇದೆಲ್ಲಾ ಕಟ್ಟುಕಥೆ ಎಂದು ಹೇಳಿ ಸುಜಾತಾ ಭಟ್ ಅಚ್ಚರಿ ಮೂಡಿಸಿದರು.
ಸುಜಾತಾ ಭಟ್ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದೇನು?
ಅನನ್ಯಾ ಭಟ್ ಕಥೆ ಸುಳ್ಳು, ಅನನ್ಯಾ ಅನ್ನೋ ಮಗಳೇ ನನಗೆ ಇರಲಿಲ್ಲ. ನಾನು ಹೇಳಿದ್ದು ಸುಳ್ಳು. ಗಿರೀಶ್ ಮಟ್ಟಣ್ಣನವರ್, ಜಯಂತ್ ಹೇಳಿಕೊಟ್ಟಂತೆ ನಾನು ಹೇಳಿದ್ದೆ ಹೊಸ ಬಾಂಬ್ ಸಿಡಿಸಿದ್ದಾರೆ.
ಮತ್ತೆ ಉಲ್ಟಾ ಹೊಡೆದ ಸುಜಾತಾ ಭಟ್!
‘ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಅನನ್ಯಾ ಭಟ್ 2003ರಲ್ಲಿ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಳು. ಮಗಳ ಅಸ್ಥಿಯನ್ನಾದರೂ ಹುಡುಕಿಕೊಡಿ’ ಅಂತಾ ಸುಜಾತಾ ಭಟ್ ದೂರು ಸಲ್ಲಿಸಿದ್ದರು. ಮಾಧ್ಯಮಗಳ ಮುಂದೆ ಬಂದು ಫೋಟೋ ತೋರಿಸಿ ಈಕೆಯೇ ತನ್ನ ಪುತ್ರಿ ಅನನ್ಯಾ ಭಟ್ ಅಂತ ಹೇಳಿದ್ದರು. ಆದರೆ ಸುಜಾತಾಳಿಗೆ ಮಗಳೇ ಇರಲಿಲ್ಲ ಅಂತಾ ಅವರ ಸಹೋದರ ತಿಳಿಸಿದ್ದರು. ಇನ್ನೊಂದೆಡೆ ಸುಜಾತಾ ತೋರಿಸಿದ್ದು ನನ್ನ ತಂಗಿ ವಾಸಂತಿ ಫೋಟೋ ಅಂತಾ ಮಡಿಕೇರಿಯ ವಿಜಯ್ ಅನ್ನೋರು ಮುಂದೆ ಬಂದಿದ್ದರು. ಆದರೆ ಇದಕ್ಕೆ ನಿನ್ನೆ ಉತ್ತರ ಕೊಟ್ಟಿದ್ದ ಸುಜಾತಾ ಮಂಜುನಾಥ ಆಣೆಗೂ ಅನನ್ಯಾ ಭಟ್ ನನ್ನ ಮಗಳೇ ಎಂದಿದ್ದರು.
ಆದರೆ ನಂತರ ನಿನ್ನೆ ಇದ್ದಕ್ಕಿದ್ದಂತೆ ಯೂಟ್ಯೂಬ್ ಚಾನಲ್ವೊಂದಕ್ಕೆ ಸಂದರ್ಶನ ನೀಡಿದ್ದ ಸುಜಾತಾ ಭಟ್ ಇಡೀ ಪ್ರಕರಣಕ್ಕೆ ರೋಚಕ ತಿರುವುಕೊಟ್ಟರು. ಅನನ್ಯಾ ಭಟ್ ಕಥೆ ಸುಳ್ಳು, ಅನನ್ಯಾ ಭಟ್ ಅನ್ನೋ ಮಗಳೇ ನನಗೆ ಇರಲಿಲ್ಲ. ನಾನು ಹೇಳಿದ್ದು ಸುಳ್ಳು. ಗಿರೀಶ್ ಮಟ್ಟಣ್ಣನವರ್, ಜಯಂತ್ ಹೇಳಿಕೊಟ್ಟಂತೆ ನಾನು ಹೇಳಿದ್ದೆ ಎಂದಿದ್ದಾರೆ.
ಆಸ್ತಿಗಾಗಿ ಅನನ್ಯಾ ಭಟ್ ಕಥೆ ಕಟ್ಟಿದ್ದೆ!
ಆಸ್ತಿಯ ವಿಚಾರಕ್ಕೆ ಈ ವಿಚಾರ ಹೇಳಿ ಅಂತಾ ಹೇಳಿದರು. ಅದಕ್ಕೆ ನಾನು ಹೇಳಿದೆ. ಅನನ್ಯಾ ಭಟ್ ಅಂತಾ ನಾನು ರಿಲೀಸ್ ಮಾಡಿದ ಫೋಟೋ ಎಲ್ಲಾ ಫೇಕ್. ನಾನು ಧರ್ಮಸ್ಥಳ ಜನರ, ಭಕ್ತರ ಭಾವನೆಗಳ ಜೊತೆ ಆಟ ಆಡಿಲ್ಲ. ಆಟ ಆಡುವ ಹಾಗೆ ಇವರು ಮಾಡಿದರು. ನನ್ನನ್ನು ಪ್ರವೋಕ್ ಮಾಡಿದರು. ನನ್ನ ತಾತನ ಆಸ್ತಿಗೋಸ್ಕರ ನಾನು ಅನನ್ಯಾ ಭಟ್ ಕಥೆಯನ್ನ ಕಟ್ಟಿದ್ದೀನಿ. ನನಗೆ ಈ ರೀತಿ ಆಗುತ್ತೆ, ಇಷ್ಟರ ಮಟ್ಟಿಗೆ ಇದು ಹೋಗುತ್ತೆ ಅನ್ನೋದು ಗೊತ್ತಿರಲಿಲ್ಲ, ಇವರು ನನ್ನನ್ನ ದುರುಪಯೋಗ ಮಾಡಿಕೊಂಡು ಬಿಟ್ಟರು. ನಾನು ದೇಶದ ಜನತೆಗೆ, ಕರ್ನಾಟಕದ ಜನತೆಗೆ ಕ್ಷಮೆ ಕೇಳುತ್ತೇನೆ. ಧರ್ಮಸ್ಥಳಕ್ಕೂ ನಾನು ಕ್ಷಮೆ ಕೇಳುತ್ತೇನೆ, ನನ್ನನ್ನ ಇದರಿಂದ ಮುಕ್ತಿಗೊಳಿಸಿ ಎಂದು ಯೂಟ್ಯೂಬ್ ಚಾನಲ್ವೊಂದಕ್ಕೆ ಸುಜಾತಾ ಭಟ್ ಹೇಳಿಕೆ ಕೊಟ್ಟಿದ್ದರು.
ಮತ್ತೆ ಉಲ್ಟಾ ಹೊಡೆದ ಸುಜಾತಾ ಭಟ್
ಯೂಟ್ಯೂಬ್ ಚಾನೆಲ್ ಗೆ ಸಂದರ್ಶನ ನೀಡಿದಲ್ಲಿಗೇ ವಿಷಯ ಮುಗಿಯಲಿಲ್ಲ, ಸುಜಾತಾ ಭಟ್ ಮತ್ತೆ ಉಲ್ಟಾ ಹೇಳಿಕೆ ನೀಡಿ ಮಾಧ್ಯಮಗಳ ಮುಂದೆ ಸಾಯಂಕಾಲ ಬಂದರು. ‘ರೌಡಿಸಂ ಮಾಡಿ, ಬೆದರಿಕೆ ಹಾಕಿ ಯೂಟ್ಯೂಬ್ನಲ್ಲಿ ಹೇಳಿಕೆ ಕೊಡಿಸಿದ್ದಾರೆ’ ಎಂದು ಆರೋಪಿಸಿದರು.
ಯೂಟ್ಯೂಬ್ನಲ್ಲಿ ಸುಜಾತಾ ಭಟ್ ನೀಡಿದ್ದ ಹೇಳಿಕೆ ದೊಡ್ಡ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೆ, ಮತ್ತೆ ಮಾಧ್ಯಮಗಳ ಮುಂದೆ ಬಂದ ಸುಜಾತಾ ಭಟ್, ಸ್ಫೋಟಕ ಆರೋಪ ಮಾಡಿದರು. ನನಗೆ ಸಹಾಯ ಮಾಡುತ್ತೇವೆ ಅಂತಾ ಹೇಳಿ, ನನ್ನ ಮೇಲೆ ರೌಡಿಸಂ ಮಾಡಿ ಆ ರೀತಿ ಹೇಳಿಕೆ ಕೊಡಿಸಿದ್ದಾರೆ. ಅಷ್ಟೇ ಅಲ್ಲ, ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧವೂ ಹೇಳಿಕೆ ಕೊಟ್ಟರೆ ನಿಮ್ಮನ್ನ ಬಚಾವ್ ಮಾಡುತ್ತೇವೆ ಅನ್ನೋದಾಗಿ ಹೇಳಿದ್ದರು ಎಂದರು.
ಎಸ್ ಐಟಿ ಮುಂದೆ ಎಲ್ಲ ಹೇಳುತ್ತೇನೆ
ಇನ್ನು ಸದ್ಯಕ್ಕೆ ನನ್ನನ್ನು ಮಾತನಾಡಿಸಲು ಬರಬೇಡಿ, ಎಸ್ ಐಟಿ ಮುಂದೆ ಎಲ್ಲವನ್ನೂ ನಾನು ಹೇಳುತ್ತೇನೆ, ದಾಖಲೆ ನೀಡುತ್ತೇನೆ ಎಂದು ಸುಜಾತಾ ಭಟ್ ಸದ್ಯ ಹೇಳಿದ್ದಾರೆ.
ಮಾನವೀಯತೆ ದೃಷ್ಟಿಯಿಂದ ನೆರವು ನೀಡಿದ್ವಿ: ಗಿರೀಶ್ ಮಟ್ಟಣ್ಣನವರ್
ಇನ್ನು ಇದೇ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿರುವ ಗಿರೀಶ್ ಮಟ್ಟಣ್ಣನವರ್, ನಾನೇನೂ ಸುಜಾತಾ ಭಟ್ ಅವರನ್ನ ಸಂಪರ್ಕಿಸಿರಲಿಲ್ಲ, ಅವರೇ ನಮ್ಮ ಬಳಿ ಬಂದಿದ್ದರು. ನಮಗೆ ಮೊದಲು ಅವರು ಅನನ್ಯ ಫೋಟೋ ಆಗಲಿ, ಬರ್ತ್ ಸರ್ಟಿಫಿಕೆಟ್ ಆಗಲಿ ಕೊಟ್ಟಿಲ್ಲ. ಹೀಗಿದ್ದರೂ ಮಾನವೀಯತೆ ದೃಷ್ಟಿಯಿಂದ ಅವರಿಗೆ ನೆರವು ನೀಡಿದೆವು ಎಂದರು.
Advertisement