
ಮಂಡ್ಯ: ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ ಮಾಸ್ಕ್ ಮ್ಯಾನ್ ಯಾರು ಎಂಬುದು ಯಾರಿಗೂ ಗೊತ್ತಿರಲಿಲ್ಲ. ದೇಹವನ್ನು ಕವರ್ ಮಾಡಿಕೊಂಡು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಾಣಿಸಿಕೊಂಡಿದ್ದ ಮಾಸ್ಕ್ ಮ್ಯಾನ್ ಯಾರು ಏನು? ಎಲ್ಲಿಯವನು ಎನ್ನುವ ಒಂದೊಂದೇ ಅಂಶಗಳು ಇದೀಗ ಬಹಿರಂಗಗೊಳ್ಳುತ್ತಿದೆ.
ಧರ್ಮಸ್ಥಳ ಗ್ರಾಮದಲ್ಲಿ ಹಲವರ ಶವಗಳನ್ನು ಹೂಳಿದ್ದೇನೆ ಎಂದು ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ಶನಿವಾರ ಎಸ್‌ಐಟಿಯಿಂದ ಬಂಧನಕ್ಕೊಳಗಾಗಿರುವ ಮಾಸ್ಕ್ ಮ್ಯಾನ್ ಮಂಡ್ಯದವನಾಗಿದ್ದು, ಈತ 3ನೇ ತರಗತಿಯವರೆಗೆ ಓದಿದ್ದ ಎಂದು ತಿಳಿದುಬಂದಿದೆ.
ಈತನ ಪೋಷಕರ ಬಗ್ಗೆ ಗ್ರಾಮದಲ್ಲಿ ಗೌರವವಿದೆ. ಆದರೆ, ಈ ವ್ಯಕ್ತಿ ಹುಟ್ಟು ಸೋಮಾರಿಯಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ವಿವಾಹವಾಗಿ, 1994ರವರೆಗೆ ಗ್ರಾಮದಲ್ಲೇ ವಾಸವಿದ್ದ. ಬಳಿಕ ಈತನ ಸಹೋದರ ಧರ್ಮಸ್ಥಳಕ್ಕೆ ಹೋದಾಗ ಅಲ್ಲಿಗೆ ಸ್ಥಳಾಂತರಗೊಂಡಿದ್ದ. ಈ ಮಧ್ಯದಲ್ಲಿ ಮೂರನೇ ವಿವಾಹ ಮಾಡಿಕೊಂಡಿದ್ದ ವ್ಯಕ್ತಿ, 2014ರಲ್ಲಿ ಗ್ರಾಮಕ್ಕೆ ವಾಪಸ್ಸಾಗಿದ್ದ. ಗ್ರಾಮದಲ್ಲಿ 1 ವರ್ಷ ವಾಸವಿದ್ದ. ಈ ಸಮಯದಲ್ಲಿ, ಗ್ರಾಮ ಪಂಚಾಯಿತಿಯು ಸರ್ಕಾರಿ ಭೂಮಿಯಲ್ಲಿ ಶೆಡ್ ವೊಂದನ್ನು ಮಂಜೂರು ಮಾಡಿತ್ತು. ಇದರ ಮೇಲೆ ಹಕ್ಕು ಸಾಧಿಸಲು ಯತ್ನಿಸಿದ್ದ. ಇದು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಗ್ರಾಮವನ್ನು ತೊರೆದಿದ್ದ.
ಧರ್ಮಸ್ಥಳದ ಬಗ್ಗೆ ಆತ ಸುಳ್ಳು ಹೇಳಿಕೆ ನೀಡುತ್ತಿರುವುದು ತಪ್ಪು. ಅವನು ಹಣಕ್ಕಾಗಿ ಹೀಗೆ ಮಾಡುತ್ತಿದ್ದಾನೆಂದು ನಮಗೆ ಅನುಮಾನವಿದೆ. ನಾವು ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ, ಅವನು ನಮ್ಮನ್ನು ದೇವಸ್ಥಾನದೊಳಗೆ ಕರೆದುಕೊಂಡು ಹೋಗುತ್ತಿದ್ದನು. ಒಮ್ಮೆ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸೀರೆಗಳನ್ನು ನೀಡಿದ್ದಾರೆಂದು ಹೇಳಿ, ಗ್ರಾಮದಲ್ಲಿ ಸೀರೆಗಳನ್ನು ವಿತರಿಸುತ್ತಿದ್ದ. ಮೃತದೇಹಗಳ ಮೇಲಿದ್ದ ಆಭರಣಗಳನ್ನು ಈತ ಕದಿಯುತ್ತಿದ್ದ ಎಂಬುದನ್ನು ನಾವು ಕೇಳಿದ್ದೇವೆಂದು ಗ್ರಾಮಸ್ಥರು ಹೇಳಿದ್ದಾರೆ.
ಮಹಾ ಸುಳ್ಳುಗಾರ: ಮೊದಲ ಪತ್ನಿ
ಆ ವ್ಯಕ್ತಿ ಮಹಾನ್ ಸುಳ್ಳುಗಾರ. ನಾನು ಅವನೊಂದಿಗೆ ಸಂಸಾರ ಮಾಡಿದ್ದೇನೆ. ಅವನು ನಿರಂತರವಾಗಿ ನನಗೆ ಸುಳ್ಳು ಹೇಳುತ್ತಿದ್ದ, ನನ್ನನ್ನು ಅನುಮಾನಿಸುತ್ತಿದ್ದ, ನನ್ನನ್ನು ಗದರಿಸುತ್ತಿದ್ದ ಅಲ್ಲದೆ, ನನಗೆ ಹೊಡೆಯುತ್ತಿದ್ದ. ವ್ಯಕ್ತಿ ದುರಹಂಕಾರಿ. ನನ್ನ ಜೀವನವನ್ನು ಹಾಳು ಮಾಡಿದ. ಈ ಹಿಂಸೆ ತಾಳಲಾರದೆ ಅವನಿಗೆ ವಿಚ್ಛೇದನ ನೀಡಿ ನಾಗಮಂಗಲದಲ್ಲಿರುವ ನನ್ನ ತಾಯಿಯ ಮನೆಗೆ ಹಿಂತಿರುಗಿದ್ದೆ ಎಂದು ಈತನ ಮೊದಲ ಪತ್ನಿ ಹೇಳಿದ್ದಾರೆ.
ಈ ಸುಳ್ಳು ಹೇಳಿಕೆಗಳನ್ನು ನೀಡಲು ಈತನನ್ನು ಪ್ರೇರೇಪಿಸಿದ್ದು ಯಾರು ಎಂಬುದನ್ನು ಪತ್ತೆ ಮಾಡಬೇಕಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ನಾಗಮಂಗಲದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳೆ, ನಾನು ಅವನನ್ನು 25 ವರ್ಷಗಳ ಹಿಂದೆ ಮದುವೆಯಾಗಿದ್ದೆ. ನಮಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಮದುವೆಯ ನಂತರ ಆತ ನನ್ನನ್ನು ಧರ್ಮಸ್ಥಳಕ್ಕೆ ಕರೆದೊಯ್ದಿದ್ದ. ಅಲ್ಲಿ ವೀರೇಂದ್ರ ಹೆಗ್ಗಡೆ ನಮಗೆ ಮನೆ ನೀಡಿದ್ದರು. 3,000 ರೂ. ಸಂಬಳಕ್ಕೆ ನೇತ್ರಾವತಿ ಸ್ನಾನದ ಘಟ್ಟದಲ್ಲಿ ಕಸ ಗುಡಿಸುವ ಮತ್ತು ಶೌಚಾಲಯ ಸ್ವಚ್ಛಗೊಳಿಸುವ ಕೆಲಸ ನೀಡಿದ್ದರು. ರಾತ್ರಿ ವೇಳೆ ನದಿಯಲ್ಲಿ ಕಂಡುಬರುವ ಗುರುತಿಸಲಾಗದ ಶವಗಳನ್ನು ಹೂಳಲಾಗುತ್ತಿತ್ತು. ಆದರೆ, ಅವರು ಹೇಗೆ ಸಾಯುತ್ತಿದ್ದರು ಎಂಬುದು ನನಗೆ ತಿಳಿದಿಲ್ಲ.
ಆತ ಯಾರೋ ನೀಡುತ್ತಿರುವ ಸೂಚನೆಯಂತೆ ವರ್ತಿಸುತ್ತಿದ್ದಾನೆ. ಈ ಮೂಲಕ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಯ ಮೇಲೆ ಅಪಮಾನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆತ ಹೇಳುತ್ತಿರುವ ಸ್ಥಳಗಳಲ್ಲಿ ಎಸ್‌ಐಟಿಗೆ ಯಾವುದೇ ಮಾನವ ಅಸ್ಥಿಪಂಜರಗಳು ಸಿಕ್ಕಿಲ್ಲ. ಎಲ್ಲಾ ಆರೋಪಗಳು ಸುಳ್ಳಾಗಿವೆ. ಧರ್ಮಸ್ಥಳವು ಪವಿತ್ರ ಸ್ಥಳವಾಗಿದೆ. ನಾವು ಅದರ ಭಕ್ತರು. ಸುಳ್ಳುಗಳನ್ನು ಹರಡಿದವರಿಗೆ ಶಿಕ್ಷೆಯಾಗಬೇಕು ಹೇಳಿದ್ದಾರೆ.
ನಾನು ಆತನಿಗೆ ವಿಚ್ಛೇತನ ನೀಡಿದ ಬಳಿಕ ಆತ ಎರಡು ಬಾರಿ ವಿವಾಹವಾಗಿದ್ದಾನೆಂದು ನನಗೆ ತಿಳಿದುಬಂದಿತ್ತು. ಓರ್ವ ಪತ್ನಿ ಸತ್ಯಮಂಗಲದ ಬನ್ನಾರಿ ನಿವಾಸಿಯಾಗಿದ್ದರು. ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ನನ್ನನ್ನು ಬಿಟ್ಟು ಹೋದ. 2ನೇ ಹೆಂಡತಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಳು. ಹಣ ನೀಡಿ ಯಾರೋ ಸುಳ್ಳು ಆರೋಪ ಮಾಡುವಂತೆ ಪ್ರೇರೇಪಿಸಿಬಹುದು ಎಂದು ತಿಳಿಸಿದ್ದಾರೆ.
ಈ ನಡುವೆ ಮಾಸ್ಕ್ ಮ್ಯಾನ್ ಸ್ನೇಹಿತ ವೈದ್ಯನಾಥಪುರದ ರಾಜು ಅವರೂ ಕೂಡ ಧರ್ಮಸ್ಥಳ ಕುರಿತು ಆತನ ನೀಡುತ್ತಿರುವ ಹೇಳಿಕೆಗಳು ಸುಳ್ಳು ಎಂದು ಹೇಳಿದ್ದಾರೆ.
Advertisement