
ಕೊಡಗು: ರಾಜ್ಯ ಸರ್ಕಾರ ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ್ದು, ಇದು ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.
ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ಹಿಂದೂ ಧರ್ಮವನ್ನು ಗೌರವಿಸುವವರಿಂದ ಮೈಸೂರು ದಸರಾ ಉದ್ಘಾಟನೆ ಮಾಡಿಸಿ ಎಂದು ಒತ್ತಾಯಿಸಿದೆ.
ಈ ಮಧ್ಯೆ ಮೈಸೂರು ಬಿಜೆಪಿ ಸಂಸದ ಹಾಗೂ ರಾಜವಂಶಸ್ಥರೂ ಆಗಿರುವ ಯದುವೀರ್ ಒಡೆಯರ್ ಅವರು, ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇಂದು ಕೊಡಗಿನ ವಿರಾಜಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಯದುವೀರ್ ಒಡೆಯರ್, ಬಾನು ಮುಷ್ತಾಕ್ ಅವರು ಖ್ಯಾತ ಬರಹಗಾರ್ತಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿದ್ದಾರೆ. ಜೊತೆಗೆ ಸಾಮಾಜಿಕ ಹೋರಾಟದಲ್ಲಿ ಗುರುತಿಸಿಕೊಂಡಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ಸಮಾನವಾದ ಹಕ್ಕು ಕೋಡಬೇಕು. ಮಸೀದಿಗಳಿಗೆ ಅವಕಾಶ ಕೋಡಬೇಕು ಎಂದು ಬಾನು ಮುಷ್ತಾಕ್ ಅವರು ಈ ಹಿಂದೆ ಸಾಮಾಜಿಕ ಬಹಿಷ್ಕಾರವನ್ನು ಕೂಡ ಎದುರಿಸಿದ್ದರು ಎಂದಿದ್ದಾರೆ. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಬಾನು ಮುಷ್ತಾಕ್ ನೀಡಿದ ಕೊಡುಗೆ ಅಪಾರವಾಗಿದ್ದು, ನಾವು ಅದನ್ನು ಗೌರವಿಸುತ್ತವೆ. ಹಾಗಾಗಿ ರಾಜ್ಯ ಸರ್ಕಾರದ ಆಯ್ಕೆ ನಿರ್ಧಾರವನ್ನು ಸ್ವಾಗತ ಮಾಡುತ್ತೇನೆ ಎಂದಿದ್ದಾರೆ.
ಆದರೆ ಈ ವರ್ಷದ ದಸರಾ ಆಚರಣೆಯ ಮುಖ್ಯ ಅತಿಥಿಯಾಗಿ ಉದ್ಘಾಟಿಸುವ ಮೊದಲು ಅವರು ತಾಯಿ ಭುವನೇಶ್ವರಿ ಮತ್ತು ತಾಯಿ ಚಾಮುಂಡೇಶ್ವರಿಯ ಬಗ್ಗೆ ಅವರ ಗೌರವವನ್ನು ಶ್ರೀಮತಿ ಭಾನು ಮುಷ್ತಾಕ್ ಸ್ಪಷ್ಟಪಡಿಸುವುದು ಈ ಸಮಯದಲ್ಲಿ ಅತ್ಯಂತ ಅಗತ್ಯ ಎಂದು ನಂತರ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಳೆದೆರಡು ದಿನಗಳಿಂದ ಬಿಜೆಪಿ ನಾಯಕರು ಬಾನು ಮುಷ್ತಾಕ್ ಅವರ ಆಯ್ಕೆಯನ್ನು ತೀವ್ರವಾಗಿ ವಿರೋಧಿಸಿಕೊಂಡು ಬರುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಯದುವೀರ್ ಒಡೆಯರ್ ಅವರ ಈ ಹೇಳಿಕೆ ಬಿಜೆಪಿಗೆ ತೀವ್ರ ಮುಖಭಂಗವನ್ನುಂಟು ಮಾಡಿದೆ.
Advertisement