
ಬೆಂಗಳೂರು: ದಕ್ಷಿಣ ಬೆಂಗಳೂರು ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಸೋಮವಾರ 'ಧರ್ಮದ ಉಳಿವಿಗೆ ಧರ್ಮ ಯುದ್ಧ' ಎಂಬ ಶೀರ್ಷಿಕೆಯಡಿ 'ಧರ್ಮಸ್ಥಳ ಚಲೋ' ಯಾತ್ರೆ ಆರಂಭವಾಯಿತು. ಯಾತ್ರೆಯಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರು ಮತ್ತು ನಾಯಕರ ದೊಡ್ಡ ಗುಂಪೇ ಸೇರಿತ್ತು.
ಜಯನಗರ ಶಾಸಕ ಸಿಕೆ ರಾಮಮೂರ್ತಿ ನೇತೃತ್ವದ ಯಾತ್ರೆಯು ಜಯನಗರ 4ನೇ ಬ್ಲಾಕ್‌ನಲ್ಲಿರುವ ಶ್ರೀ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭವಾಯಿತು.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರು ಯಾತ್ರೆಗೆ ಚಾಲನೆ ನೀಡಿದರು.
'ಇಂದು ನೈಸ್ ರಸ್ತೆಯ ಲಿಂಕ್ ರಸ್ತೆ ಜಂಕ್ಷನ್‌ನಲ್ಲಿ ಬಿಜೆಪಿಯ ಬೆಂಗಳೂರು ದಕ್ಷಿಣ ಘಟಕ ಕೈಗೊಂಡಿರುವ ಧರ್ಮಸ್ಥಳ ಚಲೋ ಯಾತ್ರೆಯಲ್ಲಿ ಭಾಗವಹಿಸಿದ್ದೆವು. ನಮ್ಮ ನೆಲದ ಹೆಮ್ಮೆಯ ಪೂಜ್ಯ ಆಧ್ಯಾತ್ಮಿಕ ಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳವು ಈಗ ಸಂಘಟಿತ ಪಿತೂರಿಗೆ ಸಿಲುಕಿದೆ' ಎಂದು ಸೂರ್ಯ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಧರ್ಮಸ್ಥಳದ ಪವಿತ್ರ ದೇವಾಲಯದ ವಿರುದ್ಧ ಹರಡುತ್ತಿರುವ ಸುಳ್ಳು ಪ್ರಚಾರವನ್ನು ಬಿಜೆಪಿ ಸ್ಪಷ್ಟವಾಗಿ ಖಂಡಿಸುತ್ತದೆ. ದೇವಾಲಯ ಮತ್ತು ಅದರ ಆಡಳಿತ ಮಂಡಳಿ ವಿರುದ್ಧ ನಡೆದ ದೊಡ್ಡ ಪಿತೂರಿಯನ್ನು ಬಯಲು ಮಾಡಲು ನಾವು ಸಿಬಿಐ ತನಿಖೆಯನ್ನು ಒತ್ತಾಯಿಸುತ್ತೇವೆ. ಯಾತ್ರೆಗೆ ಚಾಲನೆ ನೀಡುವ ಸಮಯದಲ್ಲಿ ನಮ್ಮೊಂದಿಗೆ ಸಾವಿರಾರು ಕಾರ್ಯಕರ್ತರು ಸೇರಿಕೊಂಡರು' ಎಂದು ಅವರು ಹೇಳಿದರು.
ಬಿಜೆಪಿಯ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಉಪಾಧ್ಯಕ್ಷ ಉಮೇಶ್ ಶೆಟ್ಟಿ ಭಾಗವಹಿಸಿದ್ದರು.
ವಾಹನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳವನ್ನು ತಲುಪಿದ ನಂತರ, ನಾಯಕರು ಒಂದು ಕಿಲೋಮೀಟರ್ ನಡೆದುಕೊಂಡು ಹೋಗಿ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲಿದ್ದಾರೆ ಮತ್ತು ಬಳಿಕ ದೇವಾಲಯದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಲಿದ್ದಾರೆ.
ಧರ್ಮಸ್ಥಳದಲ್ಲಿ ಲೈಂಗಿಕ ದೌರ್ಜನ್ಯದ ಗುರುತುಗಳನ್ನು ಹೊಂದಿರುವ ಮಹಿಳೆಯರ ಶವಗಳು ಸೇರಿದಂತೆ ಹಲವಾರು ಶವಗಳನ್ನು ಹೂಳಲಾಗಿದೆ ಎಂದು ದೂರುದಾರರು ಹೇಳಿದ ನಂತರ ವಿವಾದ ಭುಗಿಲೆದ್ದಿತು.
Advertisement