
ಬೆಂಗಳೂರು: ಮೈಸೂರು ದಸರಾ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಅವರು ಬುಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರ ಹೆಸರನ್ನು ಘೋಷಿಸಿದ ಬೆನ್ನಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಮಧ್ಯೆ ರಾಜಕೀಯ ಜಟಾಪಟಿ ಶುರುವಾಗಿದ್ದು, ಕಮಲ ಪಾಳಯ ಬಾನು ಅವರ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದೆ.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಹಿಂದೂ ಧರ್ಮದಲ್ಲಿ ನಂಬಿಕೆಯಿಲ್ಲದ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯನ್ನು ಆಯ್ಕೆ ಮಾಡಿದೆ. ಬಾನು ಅವರನ್ನು ಆಯ್ಕೆ ಮಾಡುವ ಮೂಲಕ ಸರ್ಕಾರ ಹಿಂದೂಗಳ ಭಾವನೆಗಳೊಂದಿಗೆ ಆಟವಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಮೈಸೂರಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ , ಬಾನು ಮುಷ್ಕಾಕ್ ಬಗ್ಗೆ ಹೆಮ್ಮೆ ಇದೆ. ಆದರೆ, ದಸರಾ ಜಾತ್ಯಾತೀತತೆ ಪ್ರತೀಕಲ್ಲ. ಹಿಂದೂ ಆಚರಣೆ ಯಾಗಿದ್ದು, ಮುಸ್ತಾಕ್ ಅವರಿಗೆ ಚಾಮುಂಡೇಶ್ವರಿ ದೇವಿಯ ಮೇಲೆ ನಂಬಿಕೆ ಇದಿಯಾ? ಅಲ್ಲಾ ಬಿಟ್ಟರೆ ಬೇರೆ ದೇವರಿಲ್ಲ ಎನ್ನುತ್ತದೆ ಇಸ್ಲಾಂ. ಹಾಗಾದರೆ ಬಾನು ಚಾಮುಂಡಿಯನ್ನು ದೇವರು ಎಂದು ಒಪ್ಪುತ್ತಾರೆಯೇ ಎಂದು ಕಿಡಿಕಾರಿದ್ದಾರೆ.
ಇನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು, ಪೂಜೆಯನ್ನು ದಿಕ್ಕರಿಸಿರುವ ಇಸ್ಲಾಂಗೆ ಸೇರಿದ ಬಾನು ಅವರು ದೇವಿಗೆ ದೀಪ ಬೆಳಗಿಸುವುದು ಅವರ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸಂತೋಷ್ ಲಾಡ್ ಅವರು, ಬಾನುರನ್ನು ದಸರಾ ಉದ್ಘಾಟನೆಗೆ ಕರೆಯಬಾರದೆಂದು ಸಂವಿಧಾನದಲ್ಲಿ ಇದೆಯೇ? ಎಲ್ಲದಕ್ಕೂ ಆಕ್ಷೇಪ ಸರಿಯಲ್ಲ. ಸರ್ಕಾರದ ತೀರ್ಮಾನ ಗೌರವಿಸಬೇಕು ಎಂದು ತಿಳಿಸಿದ್ದಾರೆ.
ವಿರೋಧ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಬಾನು ಮುಷ್ತಾಕ್ ಅವರು, ನನ್ನ ಭಾರತವನ್ನು ಸಣ್ಣದಾಗಿ ನೋಡಲು ನಾನು ಅವಕಾಶ ನೀಡುವುದಿಲ್ಲ. ಹೀಗಾಗಿ ನಾನು ಯಾರ ವಿರುದ್ಧವೂ ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ.
Advertisement