
ಬೆಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಹೇಗೆ ಮಾಡಬೇಕು ಎಂಬುದನ್ನು ಪೊಲೀಸರು ನಿರ್ಧರಿಸುತ್ತಾರೆ. ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವಹಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಸೋಮವಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮಂಪರು ಪರೀಕ್ಷೆ ಬೇಕೋ, ಬೇಡವೋ ಎಂಬುದನ್ನು ನಾನು ನಿರ್ಧರಿಸಲು ಸಾಧ್ಯವಿಲ್ಲ. ಎಸ್ಐಟಿ ಸರಿಯಾಗಿಯೇ ತನಿಖೆ ನಡೆಸುತ್ತಿದೆ. ಹಲವು ಹೇಳಿಕೆಗಳು ಹೊರಬರುತ್ತಿರುವುದನ್ನು ನಾನು ಗಮನಿಸಿದ್ದೇನೆ. ಆದರೆ, ಹೇಳಿಕೆ ನೀಡುವುದರಿಂದ ಸತ್ಯ ಹೊರಬರುವುದಿಲ್ಲ. ರಾಜಕಾರಣಿಗಳು ಮೊದಲು ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲಿ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ತನಿಖೆಗೆ ಗಡುವು ನಿಗದಿಪಡಿಸಲು ಸಾಧ್ಯವಿಲ್ಲ. 'ಇಷ್ಟು ಸಮಯದಲ್ಲಿ' ತನಿಖೆಯನ್ನು ಮುಗಿಸಲು ನಾವು ಅವರಿಗೆ ಆದೇಶಿಸಲು ಆಗದು. ಸಾಧ್ಯವಾದಷ್ಟು ಬೇಗ ತನಿಖೆಯನ್ನು ಮುಗಿಸಲು ಮಾತ್ರ ನಾನು ಎಸ್ಐಟಿಗೆ ಸೂಚಿಸಿದ್ದೇನೆ ಎಂದರು.
ಧರ್ಮಸ್ಥಳ ಚಲೋ ಕೈಗೊಂಡಿರುವ ಬಿಜೆಪಿ ಕುರಿತು ಪ್ರತಿಕ್ರಿಯಿಸಿದ ಅವರು, ಅವರೆಲ್ಲರೂ ಮಂಜುನಾಥನ ದರ್ಶನ ಪಡೆಯಲು ಹೋಗುತ್ತಿರಬೇಕು. ಅವರು ಹೋಗಲಿ. ದರ್ಶನಕ್ಕೆ ಹೋಗುವವರನ್ನು ತಡೆಯಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂಬುದೇ ನನ್ನ ವಿನಂತಿ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆರ್‌ಎಸ್‌ಎಸ್ ಗೀತೆಯನ್ನು ಪಠಿಸಿದ್ದರ ಮತ್ತು ಹೇಳಿಕೆ ನೀಡಿದ್ದರ ಕುರಿತು ಪ್ರತಿಕ್ರಿಯಿಸಿದ ಅವರು, 'ನಾನು ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಪರಮೇಶ್ವರ ಹೇಳಿದರು.
ಮೈಸೂರಿನಲ್ಲಿ ನಾಡಹಬ್ಬ 'ದಸರಾ' ಉದ್ಘಾಟಿಸಲು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಸ್ತಾಕ್ ಅವರ ಆಯ್ಕೆಗೆ ಬಂದಿರುವ ಆಕ್ಷೇಪಣೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ, 'ದಸರಾ, ನಾಡಹಬ್ಬವಾಗಿದ್ದು, ಇದು ಯಾವುದೇ ನಿರ್ದಿಷ್ಟ ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ಒಂದು ನಿರ್ದಿಷ್ಟ ಧರ್ಮವನ್ನು ಹೊರತುಪಡಿಸಿ ದಸರಾ ನಡೆಸಲು ಸಾಧ್ಯವೇ? ಮಿರ್ಜಾ ಇಸ್ಮಾಯಿಲ್ ಅವರು ಮೈಸೂರು ರಾಜ್ಯದ ದಿವಾನರಾಗಿದ್ದಾಗ ಮೈಸೂರು ದಸರಾದಲ್ಲಿ ಭಾಗವಹಿಸಲಿಲ್ಲವೇ? ಕವಿ ನಿಸಾರ್ ಅಹ್ಮದ್ ಅವರು ಈ ಹಿಂದೆ ದಸರಾ ಉದ್ಘಾಟಿಸಲಿಲ್ಲವೇ? ಎಲ್ಲ ವಿಚಾರಗಳಿಗೂ ಆಕ್ಷೇಪಣೆಗಳನ್ನು ಎತ್ತಬಾರದು. ದೇವತೆ ಶ್ರೀ ಚಾಮುಂಡೇಶ್ವರಿ ದೇವಿಯನ್ನು ನಂಬಬೇಕೆ ಅಥವಾ ಬೇಡವೇ ಎಂಬುದು ಅವರಿಗೆ ಬಿಟ್ಟದ್ದು. ಇದು ಇಡೀ ಮೈಸೂರು ನಗರದ ಹಬ್ಬವಾಗಿದ್ದು, ಎಲ್ಲರೂ ಒಟ್ಟಾಗಿ ಇದನ್ನು ಆಚರಿಸಬೇಕು' ಎಂದು ಹೇಳಿದರು.
ಗೃಹ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಮಾಜಿ ಸಚಿವ ಸಾರಾ ಮಹೇಶ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, 'ಮಹೇಶ್ ಈ ಹಿಂದೆ ಸಚಿವರಾಗಿದ್ದರು. ಅವರು ಜವಾಬ್ದಾರಿಯುತ ನಾಯಕ. ಲಂಚವನ್ನು ಯಾರು ಪಡೆದರು ಮತ್ತು ಯಾರು ನೀಡಿದರು ಎಂಬುದರ ಕುರಿತು ಅವರು ದೂರು ನೀಡಿದರೆ, ನಾವು ತನಿಖೆ ನಡೆಸುತ್ತೇವೆ. ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಅವರಿಗೆ ತಿಳಿದಿದ್ದರೆ, ಅವರು ಅದನ್ನು ಲಿಖಿತವಾಗಿ ನೀಡಬೇಕು' ಎಂದು ಹೇಳಿದರು.
Advertisement