
ಬೆಂಗಳೂರು: ಧರ್ಮಸ್ಥಳ ಗ್ರಾಮ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದಲ್ಲಿ ಬಂಧಿತ ಅನಾಮಿಕ ಚಿನ್ನಯ್ಯನ ವಿಚಾರಣೆ 3ನೇ ದಿನವಾದ ಸೋಮವಾರವೂ ಬೆಳ್ತಂಗಡಿ ಎಸ್‌ಐಟಿ ಕಚೇರಿಯಲ್ಲಿ ಮುಂದುವರಿಯಿತು. ವಿಚಾರಣೆ ವೇಳೆ ಚಿನ್ನಯ್ಯ ಪಿತೂರಿ ಹಿಂದಿರುವವರ ಹೆಸರುಗಳನ್ನು ಬಹಿರಂಗಪಡಿಸಿದ್ದಾನೆಂದು ಮೂಲಗಳಿಂದ ತಿಳಿದುಬಂದಿದೆ.
ವಿಚಾರಣೆ ವೇಳೆ ಅನಾಮಿಕ ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದು, ಅಪಪ್ರಚಾರದ ಹಿಂದಿರುವವರ ಹೆಸರುಗಳನ್ನು ಬಹಿರಂಗಪಡಿಸಿದ್ದಾನೆಂದು ಹೆಸರು ಬಹಿರಂಗಪಡಿಸಲು ಬಯಸದಿರುವ ಎಸ್‌ಐಟಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಚಿನ್ನಯ್ಯ ಹೆಸರಿಸಿರುವ ವ್ಯಕ್ತಿಗಳನ್ನು ವಶಕ್ಕೆ ಪಡೆಯಲು ಸಿದ್ಧತೆ ನಡೆಸಲಾಗುತ್ತಿದ್ದು, ಸಾಕ್ಷ್ಯಾಧಾರಗಳು ಸಿಕ್ಕಿದರೆ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ದೂರುದಾರ ಚಿನ್ನಯ್ಯ ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದ ತಲೆಬುರುಡೆಯನ್ನು ಪ್ರಯೋಗಾಲಯದಿಂದ ವಾಪಸ್ ಪಡೆಯಲಾಗಿದೆ ಎಂಬ ವರದಿಯನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.
ಇನ್ನೂ ಎಫ್‌ಎಸ್‌ಎಲ್ ವರದಿ ಬಂದಿಲ್ಲ. ತಲೆಬುರುಡೆ 40 ವರ್ಷ ಹಳೆಯದು ಎಂದು ಎಫ್‌ಎಸ್‌ಎಲ್ ತಜ್ಞರಿಂದ ಮಾಹಿತಿ ಬಂದಿದೆ. ತಲೆಬುರುಡೆಯನ್ನು ಹೊರತೆಗೆದ ಸ್ಥಳ ತೋರಿಸಲು ದೂರುದಾರ ವ್ಯಕ್ತಿಗೆ ಸಾಧ್ಯವಾಗಿಲ್ಲ. ಯಾರೋ ವ್ಯಕ್ತಿಗಳು ತನಗೆ ನೀಡಿರುವುದಾಗಿ ಆತ ಹೇಳಿದ್ದಾನೆ. ಹೀಗಾಗಿ ಆತನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ ದೂರುದಾರ ವ್ಯಕ್ತಿಯ ವಿರುದ್ಧ ಆರೋಪಗಳನ್ನು ಮಾಡಿರುವ ಆತನ ಕುಟುಂಬದವರ ಹೇಳಿಕೆಗಳನ್ನು ಎಸ್ಐಟಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಇಂದೂ ಕೂಡ ವಿಚಾರಣೆ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಏತನ್ಮಧ್ಯೆ, ಕಾರ್ಯಕರ್ತ ಜಯಂತ್ ಟಿ ಸೋಮವಾರ ಬೆಳ್ತಂಗಡಿ ಪೊಲೀಸರ ಮುಂದೆ ಹಾಜರಾಗಿ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ದಿನದಂದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಹೇಳಿಕೆಯನ್ನು ದಾಖಲಿಸಿದ್ದಾರೆ.
ವಿಚಾರಣೆ ಬಳಿಕ ಪ್ರತಿಕ್ರಿಯೆ ನೀಡಿರುವ ಜಯಂತ್ ಅವರು, ಸತ್ಯ ಮಾತನಾಡುವವರನ್ನು ಗುರಿಯಾಗಿಸಲಾಗುತ್ತಿದೆ. ನನ್ನನ್ನು ಜೈಲಿಗೆ ಹಾಕಲಿ, ನಾನು ಸಿದ್ಧನಿದ್ದೇನೆ. ನಾನು ಯಾರನ್ನೂ ಅತ್ಯಾಚಾರ ಮಾಡಿಲ್ಲ ಅಥವಾ ಕೊಲೆ ಮಾಡಿಲ್ಲ. ನಾನು ಯಾರ ಆಸ್ತಿಯನ್ನೂ ಕಸಿದುಕೊಂಡಿಲ್ಲ. ಅತ್ಯಾಚಾರ ಮತ್ತು ಕೊಲೆಗೆ ಬಲಿಯಾದ ಮಹಿಳೆಯರ ಪರ ನಾನು ಹೋರಾಡುತ್ತಿದ್ದೇನೆ. ಈ ಹೋರಾಟಕ್ಕೆ ನನಗೆ ಯಾವುದೇ ಹಣ ಬಂದಿಲ್ಲ ಅಥವಾ ನಾನು ಯಾವುದೇ ದೇವಾಲಯ ಅಥವಾ ಪ್ರಭಾವಿ ವ್ಯಕ್ತಿಯನ್ನು ಗುರಿಯಾಗಿಸಿಕೊಂಡಿಲ್ಲ. ಅತ್ಯಾಚಾರಿಗಳು, ಕೊಲೆಗಾರರನ್ನು ಪತ್ತೆಹಚ್ಚಿ ಶಿಕ್ಷಿಸಬೇಕೆಂದು ನಾವು ಬಯಸುತ್ತಿದ್ದೇವೆ. ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುವ ಬೇಡಿಕೆ ಇದೆ. ಆದರೆ, ಎಸ್‌ಐಟಿ ತನಿಖೆ ಮುಂದುವರಿಯಬೇಕು. ನಮ್ಮ ಪೊಲೀಸರು ಸಮರ್ಥರಾಗಿದ್ದಾರೆಂದು ಹೇಳಿದರು.
ಏತನ್ಮಧ್ಯೆ, ಮತ್ತೆ ಸಮನ್ಸ್ ಪಡೆದ ಯೂಟ್ಯೂಬರ್ ಸಮೀರ್ ಎಂಡಿ ಸೋಮವಾರ ಬೆಳ್ತಂಗಡಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು.
Advertisement