ನಾಡಿನಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ: ಬೆಲೆ ಏರಿಕೆ ಮಧ್ಯೆ ಖರೀದಿ ಭರಾಟೆ
ಹಿಂದೂ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಒಂದಾದ ಗೌರಿ ಗಣೇಶ ಹಬ್ಬವನ್ನು ಇಂದು ಮತ್ತು ನಾಳೆ ನಾಡಿನಾದ್ಯಂತ ಜನರು ಶ್ರದ್ಧಾ ಭಕ್ತಿ ಮನರಂಜನೆಗಳಿಂದ ಆಚರಿಸುತ್ತಿದ್ದಾರೆ.
ನಗರ ಪ್ರದೇಶಗಳಲ್ಲಿ ಕೆಲ ಬೀದಿ ಬೀದಿಗಳಲ್ಲಿ ಗಣೇಶನ ವಿಗ್ರಹಗಳನ್ನು ಕೂರಿಸಲಾಗಿದೆ. ಎಲ್ಲರೂ ಸಂಭ್ರಮ, ಸಡಗರದಿಂದ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾಗಿದ್ದಾರೆ. ಸಿಲಿಕಾನ್ ಸಿಟಿಯ ಬೀದಿ ಬೀದಿಯಲ್ಲೂ ವಿನಾಯಕನನ್ನು ಕಾಣಬಹುದು.
ಬೆಂಗಳೂರಿನಲ್ಲಿ ಹಣ್ಣು-ಹೂವು ದುಬಾರಿ
ಇಂದು ಗೌರಿಗೆ ವಿಶೇಷ ಪೂಜೆ ಹಾಗೂ ನಾಳೆ ಗೌರಿ ಮಗ ಗಣಪತಿ ಪ್ರತಿಷ್ಠಾಪನೆ ಮಾಡುವುದರಿಂದ ಹೂವು, ಹಣ್ಣುಗಳ ಖರೀದಿಗೆಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಾರುಕಟ್ಟೆಗೆ ಬಂದಿದ್ದಾರೆ. ಹೀಗಾಗಿ ಕೆ.ಆರ್ ಮಾರ್ಕೆಟ್ ಸುತ್ತಮುತ್ತ ಟ್ರಾಫಿಕ್ ಸಮಸ್ಯೆ ಆಗಿದೆ.
ಗಣೇಶ ಚತುರ್ಥಿ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿಗೆ ಸಾಕಷ್ಟು ಗ್ರಾಹಕರು ಮಾರುಕಟ್ಟೆಗೆ ಧಾವಿಸಿದ್ದಾರೆ. ಇದರಿಂದ ಮಾರ್ಕೆಟ್ ಸುತ್ತಲಿನ ರಸ್ತೆಗಳಲ್ಲಿ ದೊಡ್ಡ ಮಟ್ಟದ ಟ್ರಾಫಿಕ್ ಆಗಿದೆ. ಇದರಿಂದ ಚಾಲಕರು, ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವು ಬಿಎಂಟಿಸಿ ಬಸ್ ಅಂತೂ ಮಾರ್ಕೆಟ್ಗೆ ಹೋಗದೇ ಒಂದು ಸ್ಟಾಪ್ ಹಿಂದೆಯೇ ಪ್ರಯಾಣಿಕರನ್ನು ಇಳಿಸಿ ವಾಪಸ್ ಹೋಗುತ್ತಿವೆ. ಕಳೆದ ಹಬ್ಬಕ್ಕೆ ಹೋಲಿಸಿದರೆ ಈ ಬಾರಿ ಹೂವು, ಹಣ್ಣುಗಳ ಬೆಲೆಗಳು ಗಗನಕ್ಕೆ ಏರಿವೆ. ಹಬ್ಬ ಇರುವುದರಿಂದ ಗ್ರಾಹಕರು ಹೆಚ್ಚಿನ ಹಣ ಕೊಟ್ಟೇ ಖರೀದಿ ಮಾಡುತ್ತಿದ್ದಾರೆ.
ದುಬಾರಿ ಪ್ರಯಾಣ ದರ
ಗೌರಿ ಗಣೇಶ ಹಬ್ಬಕ್ಕೆ ಹಲವರು ಊರುಗಳಿಗೆ ಹೋಗುತ್ತಿದ್ದು ರೈಲು, ಬಸ್ಸುಗಳು ರಶ್ಶಾಗಿವೆ. ಖಾಸಗಿ ಬಸ್ಗಳು ಬಸ್ ಪ್ರಯಾಣ ಏರಿಕೆ ಮಾಡಿವೆ.
ಗಣೇಶನ ಹಬ್ಬಕ್ಕೆ ಜನ ಸಾಮಾನ್ಯರಿಗೆ ದರ ಏರಿಕೆಯ ಬರೆ ಎಳೆಯಲಾಗುತ್ತಿದೆ. ಕೆಲ ಖಾಸಗಿ ಬಸ್ ಮಾಲೀಕರಿಂದ ಜನ ಸಾಮಾನ್ಯರ ಸುಲಿಗೆ ನಡೆಯುತ್ತಿದೆ ಎನ್ನಬಹುದು. ಬಸ್ ಪ್ರಯಾಣ ದರ, ಒನ್ ಟು ತ್ರಿಬಲ್ಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಪ್ರಯಾಣಿಕರು ದುಬಾರಿ ಹಣ ಕೊಟ್ಟು ತಮ್ಮ ಊರಿಗೆ ಹೋಗಬೇಕಿದೆ. ಗೌರಿ, ಗಣೇಶ ಹಬ್ಬವೆಂದು ಊರಿಗೆ ಹೋಗುತ್ತಿದ್ದವರಿಂದ ದರೋಡೆ ಮಾಡಲಾಗುತ್ತಿದೆ.
ಗೌರಿ ಹಬ್ಬ
ಗಣೇಶ ಹಬ್ಬವನ್ನು ಆಚರಿಸುವುದಕ್ಕೂ ಒಂದು ದಿನದ ಮೊದಲು ಇಂದು ನಾವು ಗೌರಿ ಹಬ್ಬವನ್ನು ಆಚರಿಸುತ್ತೇವೆ. ಈ ಗೌರಿ ಹಬ್ಬವು ಪಾರ್ವತಿ ದೇವಿಗೆ ಸಮರ್ಪಿತವಾದ ಹಬ್ಬವಾಗಿದ್ದು, ಈ ದಿನದಂದು ಪಾರ್ವತಿ ದೇವಿಯನ್ನು ಗೌರಿಯಾಗಿ ಪೂಜಿಸಲಾಗುತ್ತದೆ. ಗೌರಿ ಹಬ್ಬವನ್ನು ಪ್ರಮುಖವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಹಬ್ಬವಾಗಿದೆ. ಈ ಶುಭ ದಿನದಂದು ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯವನ್ನು ಕೋರಿ ವ್ರತವನ್ನು ಆಚರಿಸುತ್ತಾರೆ. ಗೌರಿ ಹಬ್ಬವನ್ನು ಆಚರಿಸುವುದರಿಂದ ಕೌಟುಂಬಿಕ ಸಮೃದ್ಧಿ ಮತ್ತು ಯಶಸ್ಸನ್ನು ಕೂಡ ಪಡೆದುಕೊಳ್ಳಲಾಗುವುದು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ