
ಹಾಸನ : ಅಂತರಾಷ್ಟ್ರೀಯ ʼಬೂಕರ್ ಪ್ರಶಸ್ತಿʼ ವಿಜೇತರಾದ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಮತ್ತು ಸ್ವಾಗತಾರ್ಹ ಎಂದು ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರು ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರು ಹೋರಾಟಗಾರ್ತಿ. ಇವರು ನಾಡಹಬ್ಬ ದಸರಾ ಉದ್ಘಾಟನೆ ಮಾಡುತ್ತಿರುವುದು ಒಳ್ಳೆಯ ವಿಚಾರ. ಇದರಲ್ಲಿ ರಾಜಕಾರಣ ಅಥವಾ ಧರ್ಮ ಬೆರಸುವುದು ಸರಿಯಲ್ಲ ಎಂದು ಹೇಳಿದರು.
ನಮ್ಮದು ಜಾತ್ಯತೀತ ರಾಷ್ಟ್ರ ಎಲ್ಲರಿಗೂ ಅವಕಾಶವಿದೆ. ಹಾಸನ ಜಿಲ್ಲೆಯ ಮಹಿಳೆಗೆ ಅವಕಾಶ ಸಿಕ್ಕಿದೆ. ಅವರೂ ಹೋರಾಟ ಮಾಡಿಕೊಂಡು ಬಂದಿರುವವರು, ಬಾನು ಮುಷ್ತಾಕ್ ಅವರು ದೇವೇಗೌಡರ ಕಾಲದವರು. ಇದರಲ್ಲಿ ರಾಜಕೀಯ ಎಲ್ಲಾ ಬಿಟ್ಟಾಕಿ, ಇದಕ್ಕೆಲ್ಲಾ ವಿರೋಧ ಮಾಡಬಾರದು. ಅಬ್ದುಲ್‍ಕಲಾಂ ರಾಷ್ಟ್ರಪತಿ ಆಗಿರಲಿಲ್ಲವೇ, ದೇವೇಗೌಡರು ಅವರನ್ನು ಹೇಗೆ ನಡೆಸಿಕೊಂಡರು ಎಂದು ಪ್ರಶ್ನಿಸಿದರು.
ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸುತ್ತಿರುವುದನ್ನು ನಾನು ಸ್ವಾಗತಿಸುತ್ತೇನೆ. ಈ ವಿಚಾರದಲ್ಲಿ ಹಿಂದೂ-ಮುಸ್ಲಿಂ ಎಂದು ಬೇರ್ಪಡಿಸುವುದು ಸೂಕ್ತವಲ್ಲ. ಯಾರಾದರೂ ವಿರೋಧ ಮಾಡಲಿ, ಹಿಂದೂ, ಮುಸ್ಲಿಂ ಯಾವುದೂ ಇಲ್ಲ, ನಾವೆಲ್ಲ ಒಂದೇ ಭಾರತೀಯರು, ನನಗೆ ಆ ತರಹದ ಭಾವನೆ ಇಲ್ಲ ಎಂದು ತಿಳಿಸಿದರು.
ಇದೇ ವೇಳೆ ಹಾಸನದಲ್ಲಿ ಸ್ಥಗಿತಗೊಂಡಿರುವ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರವನ್ನು ರೇವಣ್ಣ ಅವರು ಒತ್ತಾಯಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಅನೇಕ ಯೋಜನೆಗಳು ಸ್ಥಗಿತಗೊಂಡಿವೆ. ನಿರ್ಲಕ್ಷಿತ ಯೋಜನೆಗಳಿಗೆ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಬೇಕು ಎಂದರು.
ಧರ್ಮಸ್ಥಳ ಪ್ರಕರಣ ಕುರಿತು ಮಾತನಾಡಿ, ಆಧಾರರಹಿತ ಹೇಳಿಕೆಗಳನ್ನು ನೀಡುವ ಮೂಲಕ ಕೆಲವರು ಧಾರ್ಮಿಕ ಕೇಂದ್ರ ಧರ್ಮಸ್ಥಳದ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರವು ಇದಕ್ಕೆ ದಾರಿ ಮಾಡಿಕೊಡಬಾರದು ಎಂದು ಹೇಳಿದರು.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಯಾವುದೇ ಜಾತಿ ಅಥವಾ ಸಮುದಾಯದ ವಿರುದ್ಧ ತಾರತಮ್ಯ ಮಾಡದೆ ಧಾರ್ಮಿಕ ಕೇಂದ್ರದ ಮೌಲ್ಯವನ್ನು ರಕ್ಷಿಸುತ್ತಿದ್ದಾರೆ ಮತ್ತು ಶ್ರೀಮಂತಗೊಳಿಸುತ್ತಿದ್ದಾರೆ. ಈ ವಿಷಯವನ್ನು ಎಸ್‌ಐಟಿ ತನಿಖೆ ನಡೆಸಿರುವುದರಿಂದ ಧರ್ಮಸ್ಥಳ ವಿಷಯದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದು ನ್ಯಾಯಯುತವಲ್ಲ ಎಂದು ಹೇಳಿದರು.
Advertisement