
ಮಂಗಳೂರು: ಅನನ್ಯಾ ಭಟ್ ನಾಪತ್ತೆ ಪ್ರಕರಣದಿಂದ ರಾಜ್ಯಾದ್ಯಂತ ಸುದ್ದಿಯಾಗಿರುವ ಸುಜಾತ ಭಟ್ ಇಂದು ಬೆಳ್ಳಂಬೆಳಗ್ಗೆ ಬೆಳ್ತಂಗಡಿಯಲ್ಲಿ ವಿಶೇಷ ತನಿಖಾ ತಂಡದ ಕಚೇರಿಗೆ ಆಗಮಿಸಿ ಅಧಿಕಾರಿಗಳಿಗೆ ಶಾಕ್ ನೀಡಿದರು.
ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಪೊಲೀಸರು ನಾಡಿದ್ದು ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸುಜಾತ ಭಟ್‌ಗೆ ನೋಟಿಸ್ ನೀಡಿದ್ದರು.
ಶುಕ್ರವಾರ ವಿಚಾರಣೆ ನಿಗದಿಯಾಗಿದ್ದರೂ ಇಂದು ಬೆಳಗ್ಗೆ 5 ಗಂಟೆಗೆ ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಇಬ್ಬರು ವಕೀಲರ ಜೊತೆ ಆಗಮಿಸಿದ್ದಾರೆ. ಸುಜಾತ ಭಟ್ ಬರುವಾಗ ಅಧಿಕಾರಿಗಳು ನಿದ್ದೆಯಲ್ಲಿದ್ದರು. ಕಚೇರಿಗೆ ಬಂದ ನಂತರ ಪೊಲೀಸರು ಸುಜಾತ ಭಟ್ ಅವರನ್ನು ಒಳಗಡೆ ಬರುವಂತೆ ಹೇಳಿದರು.
ಮಣಿಪಾಲದಲ್ಲಿ ಎಂಬಿಬಿಎಸ್ ಓದುತ್ತಿದ್ದ ಪುತ್ರಿ ಅನನ್ಯಾ ಭಟ್ ಧರ್ಮಸ್ಥಳಕ್ಕೆ ಬಂದಾಗ ನಾಪತ್ತೆಯಾಗಿದ್ದಳು, ಅವಳ ಹತ್ಯೆಯಾಗಿದೆ. ಈ ಬಗ್ಗೆ ಠಾಣೆಗೆ ಹೋದಾಗ ಯಾರೂ ನನ್ನ ದೂರನ್ನು ತೆಗೆದುಕೊಂಡಿಲ್ಲ. ಪ್ರಶ್ನೆ ಮಾಡಿದರೆ ನನಗೆ ಧರ್ಮಸ್ಥಳದಲ್ಲಿ ಹೊಡೆಯಲಾಗಿತ್ತು. ಉತ್ಕನನದ ವೇಳೆ ನನ್ನ ಮಗಳ ಮೂಳೆ ಸಿಕ್ಕಿದರೆ ನಾನು ಸನಾತನ ಹಿಂದೂ ಧರ್ಮದ ಪ್ರಕಾರ ಅಂತ್ಯಸಂಸ್ಕಾರ ಮಾಡುತ್ತೇನೆ ಎಂದು ಸುಜಾತ ಭಟ್ ಪೊಲೀಸರಿಗೆ ದೂರು ನೀಡಿದ್ದರು.
ಪರಿಶೀಲನೆಯ ನಂತರ, DG & IGP ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಎಸ್‌ಐಟಿಗೆ ವರ್ಗಾಯಿಸಿದರು.
ಸುಜಾತಾ ಅವರು ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದು, ತನಗೆ ಎಂದಿಗೂ ಹೆಣ್ಣು ಮಗು ಇಲ್ಲ ಮತ್ತು ಇತರರ ಪ್ರಚೋದನೆಯ ಮೇರೆಗೆ ಸುಳ್ಳು ದೂರು ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ನಂತರ ಅವರು ಆ ಹೇಳಿಕೆಯನ್ನು ಸಹ ವಾಪಸ್ ಪಡೆದರು.
ಅನನ್ಯಾಳ ಅಸ್ತಿತ್ವದ ಕುರಿತಾದ ವಿವಾದಗಳು ಮತ್ತು ಸಾಕ್ಷಿಗಳ ಹೇಳಿಕೆಗಳು ಸೇರಿದಂತೆ ಪ್ರಕರಣವು ಹಲವು ತಿರುವುಗಳನ್ನು ಕಂಡಿದೆ.
ಕಣ್ಮರೆಗೆ ಸಂಬಂಧಿಸಿದಂತೆ ಸಾಕ್ಷಿಗಳನ್ನು ಪರಿಶೀಲಿಸುವಾಗ ವಿಚಾರಣೆ ಮುಂದುವರಿಯುತ್ತದೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
Advertisement