
ಬೆಂಗಳೂರು: ಭೂಸ್ವಾಧೀನಕ್ಕೆ ಸಂಬಂಧಿಸಿದ ವಿವಾದಗಳನ್ನು ಇತ್ಯರ್ಥಪಡಿಸದೆ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತವನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.
ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗಿನ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪರಿಹಾರದ ಹಣವನ್ನು ಸ್ವೀಕರಿಸದೆ 28,972 ಜನರು ನ್ಯಾಯಾಲಯಗಳ ಮೊರೆ ಹೋಗಿದ್ದಾರೆ . ಇವುಗಳನ್ನು ಇತ್ಯರ್ಥಪಡಿಸದೆ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ವಿಚಾರವಾಗಿ ಸರ್ವ ಪಕ್ಷಗಳ ಹಾಗೂ ವಿಜಯಪುರ, ಬಾಗಲಕೋಟೆ ಭಾಗದ ಜನಪ್ರತಿನಿಧಿಗಳ, ರೈತ ಮುಖಂಡರ ಸಭೆ ನಡೆಸಲಾಗುವುದು. ರೈತರಿಗೂ ನಷ್ಟವಾಗದಂತಹ ಪರಿಹಾರ ಮೊತ್ತಕ್ಕೆ ಸರ್ವ ಸಮ್ಮತ ಒಪ್ಪಿಗೆ ದೊರೆತರೆ ಮಾತ್ರ ಯೋಜನೆ ಮುಂದುವರಿಯಬಹುದು ಎಂದು ತಿಳಿಸಿದರು.
ಕೆಲ ವಕೀಲರು ಹಾಗೂ ಭೂ ಮಾಲಕರು ಸೇರಿಕೊಂಡು ದುಪ್ಪಟ್ಟಿಗಿಂತ ಹೆಚ್ಚು ಪರಿಹಾರಕ್ಕೆ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಹೂಡಿದ್ದಾರೆ. 19,957 ಪ್ರಕರಣಗಳು ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿಯುಳಿದಿವೆ. 9,015 ಪ್ರಕರಣಗಳು ಬೇರೆ ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. ಆದರೆ, ಈ ಯೋಜನೆಯಡಿ ಸುಮಾರು 20 ಗ್ರಾಮಗಳು ಮುಳುಗಡೆಯಾಗಲಿವೆ.
ನಾನು ಇಲಾಖೆಯ ಜವಾಬ್ದಾರಿ ತೆಗೆದುಕೊಂಡ ನಂತರ 14,817 ಪ್ರಕರಣಗಳಿಗೆ ಕೆಬಿಜಿಎನ್ ಎಲ್ ಅನ್ನು ಜವಾಬ್ದಾರಿ ತೆಗೆದುಕೊಳ್ಳಲಾಗಿದೆ. 5,086 ಪ್ರಕರಣಗಳನ್ನು ಪ್ರತಿವಾದಿಗಳು ತೆಗೆದುಕೊಂಡಿಲ್ಲ. 837 ಪ್ರಕರಣಗಳು ಇತ್ಯರ್ಥಗೊಂಡಿವೆ. 13,913 ಪ್ರಕರಣಗಳು ಬಾಕಿಯಿವೆ. ವಿವಿಧ ನ್ಯಾಯಾಲಯದಲ್ಲಿರುವ 749 ಪ್ರಕರಣದಲ್ಲಿ 46 ಪ್ರಕರಣಗಳು ಕೆಬಿಜಿಎನ್ ಎಲ್ ಪ್ರಕಾರ ಆದೇಶ ಬಂದಿದೆ. 949 ಪ್ರಕರಣಗಳನ್ನು ವಿಲೇವಾರಿ ಮಾಡಲು ಬಾಕಿ ಉಳಿದಿದೆ. ಧಾರವಾಡದಲ್ಲಿ 19, ಕಲಬುರಗಿ ನ್ಯಾಯಾಲಯದಲ್ಲಿ ಸುಮಾರು 90 ಪ್ರಕರಣಗಳಿಗೆ ತಡೆಯಾಜ್ಞೆ ಸಿಕ್ಕಿದೆ ಎಂದು ಮಾಹಿತಿ ನೀಡಿದರು.
Advertisement