ಚಾಮುಂಡಿ ಬೆಟ್ಟ ಹಿಂದೂ ಧರ್ಮದ ಆಸ್ತಿಯಲ್ಲ: ಡಿಕೆ ಶಿವಕುಮಾರ್‌ ಹೇಳಿಕೆಗೆ ಯದುವೀರ್ ಖಂಡನೆ

ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ. ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಮಸೀದಿ, ದರ್ಗಾಗಳಿಗೆ, ಜೈನರ ಬಸದಿಗಳಿಗೆ, ಚರ್ಚ್, ಗುರುದ್ವಾರಗಳಿಗೆ ನಾವು ಹೋಗುವುದನ್ನು ಯಾರಾದರೂ ತಡೆದಿದ್ದಾರೆಯೇ?
DK shivkumar
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌
Updated on

ಬೆಂಗಳೂರು: ಚಾಮುಂಡಿ ಬೆಟ್ಟ, ಚಾಮುಂಡಿ ದೇವರು ಹಿಂದೂಗಳ ಆಸ್ತಿ ಅಲ್ಲ, ಎಲ್ಲಾ ಧರ್ಮದವರಿಗೂ ಸೇರಿದ್ದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬುಧವಾರ ಹೇಳಿದ್ದು, ಹೇಳಿಕೆಯನ್ನು ಸಂಸದ ಹಾಗೂ ಮೈಸೂರು ರಾಜವಂಶಸ್ಥರೂ ಆಗಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಖಂಡಿಸಿದ್ದಾರೆ.

ಮೈಸೂರು ದಸರಾ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್‌ ಅವರಿಗೆ ಆಹ್ವಾನ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್‌ ಅವರು, ಚಾಮುಂಡಿ ಬೆಟ್ಟ ಹಿಂದೂ ಧರ್ಮದ ಆಸ್ತಿಯಲ್ಲ' ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.

ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ. ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಮಸೀದಿ, ದರ್ಗಾಗಳಿಗೆ, ಜೈನರ ಬಸದಿಗಳಿಗೆ, ಚರ್ಚ್, ಗುರುದ್ವಾರಗಳಿಗೆ ನಾವು ಹೋಗುವುದನ್ನು ಯಾರಾದರೂ ತಡೆದಿದ್ದಾರೆಯೇ? ಹಿಂದೂ ದೇವಸ್ಥಾನಗಳಿಗೆ ಅವರುಗಳು ಬರುವುದನ್ನು ನಾವು ವಿರೋಧಿಸಿದ್ದೇವೆಯೇ? ಯಾವುದೇ ಶ್ರದ್ದಾ ಕೇಂದ್ರಗಳಿಗೆ ಯಾರು ಬೇಕಾದರೂ ಹೋಗಿ ಬರಬಹುದು’ ಎಂದು ಹೇಳಿದರು.

‘ಎಷ್ಟೋ ಜನ ಹಿಂದೂಗಳು ಮುಸ್ಲಿಮರಾಗಿ, ಕ್ರಿಶ್ಚಿಯನ್ನರಾಗಿ ಹಾಗೂ ಬೇರೆ ಧರ್ಮದವರು ಹಿಂದೂಗಳಾಗಿ ಮತಾಂತರ ಆಗಿಲ್ಲವೇ? ಮುಸ್ಲಿಮರು ಹಿಂದೂ ಧರ್ಮದ ಆಚರಣೆಗಳನ್ನು ಮಾಡುತ್ತಿಲ್ಲವೇ? ಅಯೋಧ್ಯೆಯ ರಾಮನ ದರ್ಶನಕ್ಕೆ ಹಿಂದೂಗಳು ಮಾತ್ರ ಬರಬೇಕು ಎಂದು ಏಕೆ ಫಲಕ ಹಾಕಿಲ್ಲ? ಬಿಜೆಪಿ ಸರ್ಕಾರ ಇದ್ದ ವೇಳೆ ಹಾಗೂ ಈಗ ಇಡೀ ದೇಶದಲ್ಲಿ ಹಜ್ ಸಮಿತಿ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಗಳನ್ನು ಏಕೆ ರದ್ದು ಮಾಡಲಿಲ್ಲ? ಇದೆಲ್ಲವೂ ರಾಜಕೀಯ’.

ಬಿಜೆಪಿಯವರು 'ಧರ್ಮದ ರಾಜಕೀಯ' ಮಾಡುವ ಬದಲು 'ಧರ್ಮದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರವನ್ನೂ ಅಶುದ್ಧಗೊಳಿಸಲು ಮುಂದಾಗಿದ್ದಾರೆ. ಈ ಕ್ಷೇತ್ರ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬಲಿಯಾಗಬಾರದು. ದಕ್ಷಿಣ ಭಾರತದ ಲಕ್ಷಾಂತರ ಭಕ್ತರ ನಂಬಿಕೆ ಇರುವ ಈ ಕ್ಷೇತ್ರವನ್ನು ದುರ್ಬಲಗೊಳಿಸಲು ಅವಕಾಶ ಕೊಡಬಾರದು ಎಂದು ನಾನು ಹೆಗಡೆಯವರಲ್ಲಿ ಮನವಿ ಮಾಡುತ್ತೇನೆ ಎಂದರು.

DK shivkumar
ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಧರ್ಮಸ್ಥಳದ ಪ್ರಕರಣವು ಬಿಜೆಪಿಯ ಎರಡು ಬಣಗಳ ನಡುವಿನ ಆಂತರಿಕ ಕಿತ್ತಾಟದಿಂದ ನಡೆಯುತ್ತಿದೆ. ಭಕ್ತಾದಿಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಬಾರದು. ಭಕ್ತರ ನಂಬಿಕೆಗೆ ಲೋಪ ಬಾರದಂತೆ ನಡೆದುಕೊಳ್ಳಬೇಕು. ಬಿಜೆಪಿಯ ಸಭೆಗಳು ಧರ್ಮದ ಸಭೆಗಳಲ್ಲ, ಅವು ರಾಜಕೀಯ ಸಭೆಗಳು. ಇಲ್ಲಿಯವರೆಗೆ ಬಂಧಿತರಾಗಿರುವವರೆಲ್ಲರೂ ಬಿಜೆಪಿಯವರೇ ಆಗಿದ್ದಾರೆ ಎಂದು ಹೇಳಿದರು.

ನಮ್ಮ ಸಂವಿಧಾನದ ಮೂಲಕ ಎಲ್ಲರಿಗೂ ಅವಕಾಶ, ಸ್ವಾತಂತ್ರ್ಯ ಕಲ್ಪಿಸಲಾಗಿದೆ.‌ ಎಲ್ಲರಿಗೂ ಅವರವರ ನಂಬಿಕೆ ಮೇಲೆ ವಿಶ್ವಾಸವಿದೆ. ಮುಸ್ಲಿಂ ಅಥವಾ ಕ್ರಿಶ್ಚಿಯನ್ ಹೆಣ್ಣು, ಹಿಂದು ಅಥವಾ ಇತರೇ ಧರ್ಮದ ಗಂಡಿಗೆ ಜನಿಸಿದ ಮಕ್ಕಳು ತಮಗೆ ಬೇಕಾದ್ದನ್ನು ಅನುಸರಿಸುತ್ತಾರೆ ಎಂದು ತಿಳಿಸಿದರು.

ಡಿಕೆ.ಶಿವಕುಮಾರ್ ಅವರ ಹೇಳಿಕೆಯನ್ನು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಅವರು ಖಂಡಿಸಿದ್ದಾರೆ.

ಈ ಹೇಳಿಕೆ ಖಂಡನೀಯ ಹಾಗೂ ನಿಂದನೀಯ. ಚಾಮುಂಡಿ ಬೆಟ್ಟ ಶಕ್ತಿಪೀಠ ಶಾಸ್ತ್ರಸಮ್ಮತ ಕೋಟ್ಯಂತರ ಹಿಂದೂಗಳ ಪವಿತ್ರ ಸ್ಥಳ. ಕಾಂಗ್ರೆಸ್ ಯಾವಾಗಲೂ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದು ನಕಲಿ ಸೆಕ್ಯುಲರಿಸಂ ಪ್ರದರ್ಶನ ಮಾಡುತ್ತದೆ. ಕರ್ನಾಟಕದ ಜನ ಎಲ್ಲ ಧರ್ಮಗಳನ್ನೂ ಗೌರವಿಸುತ್ತಾರೆ. ಆದರೆ, ಹಿಂದೂ ಹಬ್ಬಗಳು, ಸಂಪ್ರದಾಯಗಳು ದೇವಾಲಯಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯನ್ನು ಸಹಿಸುವುದಿಲ್ಲ ಎಂದಿದ್ದಾರೆ.

ಈ ದೇವಸ್ಥಾನದ ಮೇಲೆ ಜಾತ್ಯತೀತ ಪಟ್ಟಿಯನ್ನು ಹಾಕುವ ಅವಶ್ಯಕತೆ ಇಲ್ಲ. ಇದು ಸಹಜವಾಗಿಯೇ ಬಹುತ್ವದ ತತ್ವದ ಮೇಲೆ ಇರುವುದರಿಂದ ಆಧುನಿಕತೆಯ ಕಾಲದಲ್ಲಿ ಜಾತ್ಯಾತೀತವಾಗಿ ನೋಡಬಹುದು. ಆದರೆ, ಇದು ಭಾರತೀಯ ಧರ್ಮ, ಹಿಂದೂ ಧರ್ಮಕ್ಕೆ ಸೇರಿರುವಂತಹ ಶಕ್ತಿ ಪೀಠ. ಕೋಟ್ಯಂತರ ಮಂದಿ ಚಾಮುಂಡಿ ತಾಯಿಯ ಮೇಲಿನ ನಂಬಿಕೆಯಿಂದ ಬರುತ್ತಾರೆ, ಒಳಿತಾಗಲೆಂದು ಪ್ರಾರ್ಥಿಸುತ್ತಾರೆ. ಡಿಕೆ.ಶಿವಕುಮಾರ್ ಅವರ ಹೇಳಿಕೆ ಖಂಡನೀಯವಾದುದು. ಮುಂದೆ ಅವರು ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಬಾರದು.

'ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಮೂಲಕ ಚಾಮುಂಡಿ ಬೆಟ್ಟವನ್ನು ಅವರ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಬೆಂಗಳೂರಿನ ಗಾಳಿ ಆಂಜನೇಯ ದೇವಸ್ಥಾನವನ್ನೂ ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಹಿಂದೂ ದೇವಾಲಯಗಳನ್ನು ಮಾತ್ರವೇ ಗುರಿಯಾಗಿಟ್ಟುಕೊಂಡು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಜೊತೆಗೆ, ಹಿಂದೂ ಧರ್ಮಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನು ಕೊಡುವುದು ಈ ಕಾಂಗ್ರೆಸ್ ಸರ್ಕಾರದಲ್ಲಿ ಹೆಚ್ಚಾಗುತ್ತಾ ಬಂದಿದೆ. ಇದು ನಿಜಕ್ಕೂ ಖಂಡನೀಯ ಬೆಳವಣಿಗೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಡಿ.ಕೆ. ಶಿವಕುಮಾರ್ ಅವರು ಅಧಿವೇಶನದಲ್ಲಿ ಆರ್‌ಎಸ್‌ಎಸ್ ಗೀತೆ ಹೇಳಿದ್ದರು. ಆರ್‌ಎಸ್ಎಸ್ ಪದ್ಧತಿ ಬಗ್ಗೆ ಕಾಳಜಿ ಹಾಗೂ ಜಾಗೃತಿ ಇದೆ ಎಂದಿದ್ದರು. ಅದಕ್ಕೆ ಅವರ ಪಕ್ಷದಿಂದ ಹಾಗೂ ಬೆಂಬಲಿಗರಿಂದ ವ್ಯಕ್ತವಾದ ಕಾರಣ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಅದನ್ನು ಮುಚ್ಚಿ ಹಾಕಿಕೊಳ್ಳಲು, ಸಮತೋಲನ ಮಾಡುವುದಕ್ಕಾಗಿ ಹಾಸ್ಯಾಸ್ಪದ ಹೇಳಿಕೆ‌ ನೀಡಿ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದ್ದಾರೆ' ಎಂದು ಟೀಕಿಸಿದರು.

'ರಾಜ್ಯದಲ್ಲಿ ಅನೇಕ ಗಂಭೀರವಾದ ಸಮಸ್ಯೆಗಳಿವೆ. ಆದರೆ, ಈ ಸರ್ಕಾರದವರು ಅವುಗಳನ್ನು ಮರೆಮಾಚಲು ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡಿ ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com