
ಬೆಂಗಳೂರು: ಧರ್ಮಸ್ಥಳ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ ತನಿಖೆಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮಂಗಳವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಸತ್ಯ ಹೊರಗೆ ಬರಬೇಕು ಎಂದು ಕೋಟ್ಯಂತರ ಭಕ್ತರು ಕಾಯುತ್ತಿದ್ದಾರೆ. ಆರೋಪಿ ಚಿನ್ನಯ್ಯನನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಎಸ್‌ಐಟಿಯವರು ವರದಿ ನೀಡಲಿ. ಮುಂದಿನ ಚರ್ಚೆ ಆನಂತರ ಎಂದು ಹೇಳಿದರು.
ಈ ವಿಚಾರದಲ್ಲಿ ಸರ್ಕಾರ ತಪ್ಪೆಸಗಿದೆ ಎಂದು ಬಿಜೆಪಿಯವರು ಯಾವ ಆಧಾರದಲ್ಲಿ ಹೇಳುತ್ತಿದ್ದಾರೆ. ಎಸ್‌ಐಟಿ ರಚಿಸಿದ್ದೇ ತಪ್ಪು ಮತ್ತು ಷಡ್ಯಂತ್ರ ಎಂದು ಹೇಳುತ್ತಿರುವುದು ವಿಪರ್ಯಾಸ. ಮಹೇಶ್ ತಿಮರೋಡಿ ಮನೆಯಲ್ಲಿ ಎಸ್‌ಐಟಿ ಶೋಧ ನಡೆಸಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪ ಇಲ್ಲ. ಮಾಹಿತಿ ಮತ್ತು ಆಧಾರದ ಮೇಲೆ ಎಸ್‌ಐಟಿ ತನಿಖೆ ನಡೆಸುತ್ತಿದೆಯೇ ಹೊರತು, ಸರ್ಕಾರದ ನಿರ್ದೇಶನದಂತೆ ಅಲ್ಲ.
ಪ್ರಕರಣದಲ್ಲಿ ಎಸ್‌ಐಟಿ ದೊಡ್ಡ ಜವಾಬ್ದಾರಿಯನ್ನು ಹೊಂದಿದ್ದು, ತನಿಖೆಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದೆ. ತನಿಖೆ ಬೇಗ ಮುಗಿಯುವುದು ಉತ್ತಮ ಎಂದು ಸರ್ಕಾರ ಕೂಡ ಅಭಿಪ್ರಾಯಪಟ್ಟಿದೆ. ದೂರುದಾರರ ಹೇಳಿಕೆಗಳು ಮತ್ತು ಅದರ ಪರಿಣಾಮಗಳನ್ನು ಎಸ್‌ಐಟಿ ಮತ್ತು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದರು.
Advertisement