
ಬೆಂಗಳೂರು: ವಿಶ್ವ ವಿಖ್ಯಾತ 'ಮೈಸೂರು ದಸರಾ-2025' ಉದ್ಘಾಟಕರಾಗಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಪರ ಹಾಗೂ ವಿರುದ್ದದ ಅಭಿಪ್ರಾಯಗಳು ಮುಂದುವರಿದಿವೆ.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್. ಡಿ. ಕುಮಾರಸ್ವಾಮಿ, ಬಾನು ಮುಷ್ತಾಕ್ ಆಯ್ಕೆಗೆ ನಾನು ವಿರೋಧ ವ್ಯಕ್ತಪಡಿಸುವುದಿಲ್ಲ ಎಂದರು.
ಆದರೆ ಚಾಮುಂಡಿ ಬೆಟ್ಟ, ಚಾಮುಂಡೇಶ್ವರಿ ದೇವತೆ ಹಿಂದೂಗಳ ಆಸ್ತಿ ಅಲ್ಲ ಎಂಬ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ. ಅದನ್ನು 'ಉದ್ಧಟತನ' ಎಂದಿದ್ದಾರೆ.
ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ದಸರಾ ಉದ್ಘಾಟನೆಗೆ ಸಾಹಿತಿ ಭಾನು ಮಸ್ತಾಕ್ ಅವರನ್ನು ಆಹ್ವಾನಿಸಿರುವುದಕ್ಕೆ ತಕರಾರು ಇಲ್ಲ. ಆದರೆ, ಹಿಂದೂ ದೇಗುಲಗಳು , ಧಾರ್ಮಿಕ ಕೇಂದ್ರಗಳು ಹಿಂದೂಗಳ ಆಸ್ತಿಯಲ್ಲ ಎನ್ನುವ ಉದ್ಧಟತನ ಹೇಳಿಕೆ ಬೇಡ. ಭಾನು ಮಸ್ತಾಕ್ ಅವರಿಂದ ಪೂಜೆ ಮಾಡಿಸೋದು ಬೇರೆ ವಿಚಾರ. ಧಾರ್ಮಿಕ ಕ್ಷೇತ್ರಗಳಿಗೆ ಈ ರೀತಿ ಹೇಳಿಕೆ ನೀಡುವುದು ಸರ್ಕಾರಕ್ಕೆ ಕುತ್ತು ತರುವಂಥದ್ದು ಎಂದು ಅವರು ಹೇಳಿದರು.
ಇನ್ನು ಧರ್ಮಸ್ಥಳ ವಿಚಾರದಲ್ಲಿ ನಾನು ರಾಜಕೀಯ ಬೆರೆಸೋಕೆ ಹೋಗಲ್ಲ. ಆದರೆ, ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಮಂಜುನಾಥಸ್ವಾಮಿಯೇ ಶಿಕ್ಷೆ ಕೊಡುತ್ತಾನೆ ಎಂದರು.
ಸರ್ಕಾರ ನಡೆದುಕೊಂಡ ರೀತಿ ನೋಡಿದರೆ ಎಸ್ ಐಟಿ ಹೆಸರಲ್ಲಿ ತನಿಖೆಯ ನಾಟಕ ಮಾಡಿದೆ. ಶ್ರೀಕ್ಷೇತ್ರಕ್ಕೆ ಅವಮಾನ ಅಪಮಾನವಾಗುವಂತೆ ಸರ್ಕಾರ ನಡೆದುಕೊಂಡಿದೆ ಎಂದು ಆರೋಪಿಸಿದರು. ಸರ್ಕಾರದ ಮುಂದೆ ದ್ವಾರಕನಾಥ್ ಎಂಬುವರು ದೂರು ಕೊಟ್ಟ ವಿಷಯದಲ್ಲಿ ಮುಖ್ಯಮಂತ್ರಿ ತಕ್ಷಣ ಕ್ರಮ ತೆಗೆದುಕೊಂಡಿದ್ದಾರೆ. ಎಡಪಂಥೀಯ ಶಕ್ತಿಗಳು ಇದೆ ಅಂತಿದಾರೆ. ಏನಿದ್ದರೂ ಮುಂದೆ ಗೊತ್ತಾಗಲಿದೆ ಎಂದರು.
Advertisement