
ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಇಂದು ಬೆಳಗ್ಗೆಯಿಂದ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ವಿವಿಧ ಜಿಲ್ಲೆಗಳಿಗೆ ಆರೆಂಜ್ ಮತ್ತು ಯಲ್ಲೋ ಅಲರ್ಟ್ ಘೋಷಿಸಿದೆ. ಕೆಲವು ಜಿಲ್ಲೆಗಳಲ್ಲಿ ಮುಂಜಾಗ್ರತೆ ಕ್ರಮವಾಗಿ ಇಂದು ಶಾಲೆಗಳಿಗೆ ರಜೆ ನೀಡಲಾಗಿದೆ.
11 ರಿಂದ 20 ಸೆಂ.ಮೀ.ಗಳ ಮಳೆ ಬೀಳುವ ಮುನ್ಸೂಚನೆ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ. ಇನ್ನು 6 ರಿಂದ 11 ಸೆಂ.ಮೀ.ಗಳ ನಡುವೆ ಸುರಿಯುವ ಮಳೆಗೆ ಯಲ್ಲೋ ಅಲರ್ಟ್ ನೀಡಲಾಗಿದೆ.
ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಭಾಲ್ಕಿ ತಾಲ್ಲೂಕಿನ ಬಾದಲ್‌ಗಾಂವ್-ಚೊಂಡಿಮುಖೇಡ್‌ನಲ್ಲಿರುವ ದಾಡಗಿ ಸೇತುವೆ ಸೇರಿದಂತೆ ಹಲವಾರು ಸೇತುವೆಗಳ ಮೇಲೆ ನೀರು ಉಕ್ಕಿ ಹರಿದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಔರಾದ್ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ಹೊಳೆ ಉಕ್ಕಿ ಹರಿಯುತ್ತಿದೆ. ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸುರಕ್ಷತಾ ಕ್ರಮವಾಗಿ ಪೀಡಿತ ಪ್ರದೇಶಗಳಲ್ಲಿನ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಜೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಭಾರತ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಹೊರಡಿಸಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವುದರಿಂದ, ಜಿಲ್ಲಾಡಳಿತವು ಇಂದು ಮಂಗಳೂರು, ಪುತ್ತೂರು, ಮೂಲ್ಕಿ, ಮೂಡಬಿದ್ರಿ, ಉಳ್ಳಾಲ ಮತ್ತು ಬಂಟ್ವಾಳ ತಾಲ್ಲೂಕುಗಳಲ್ಲಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಸಂಸ್ಥೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿದೆ.
ತಗ್ಗು ಪ್ರದೇಶಗಳು, ಕೆರೆ, ಸಮುದ್ರ ತೀರಗಳು ಮತ್ತು ನದಿ ತೀರಗಳಿಗೆ ಮಕ್ಕಳು ಹೋಗದಂತೆ ನೋಡಿಕೊಳ್ಳುವಂತೆ ಪೋಷಕರಿಗೆ ಎಚ್ಚರಿಕೆ ನೀಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಪ್ರಧಾನ ಕಚೇರಿಯಲ್ಲಿರಲು ಸೂಚಿಸಲಾಗಿದೆ.
ನೋಡಲ್ ಅಧಿಕಾರಿಗಳು ಜಾಗರೂಕರಾಗಿರಲು ಮತ್ತು ಸಾರ್ವಜನಿಕ ದೂರುಗಳಿಗೆ ಸ್ಪಂದಿಸಲು ಸೂಚಿಸಲಾಗಿದೆ.
ಬೆಂಗಳೂರಿನಲ್ಲಿಯೂ ಮಳೆ
ಬೆಂಗಳೂರಿನ ಹವಾಮಾನ ಕೇಂದ್ರವು ಮುಂದಿನ ಮೂರು ಗಂಟೆಗಳಲ್ಲಿ ಮಿಂಚು ಮತ್ತು ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಜೊತೆಗೆ ಹಗುರದಿಂದ ಮಧ್ಯಮ ಪ್ರಮಾಣದಲ್ಲಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ವಿಜಯಪುರ, ಬಾಗಲಕೋಟೆ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.
ಸಾರ್ವಜನಿಕರು ಸುರಕ್ಷತೆ ಕ್ರಮವಾಗಿ ಸಾಧ್ಯವಾದಷ್ಟು ಮನೆಯೊಳಗೆ ಇರಲು, ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಲು, ಅನಗತ್ಯ ಪ್ರಯಾಣವನ್ನು ತಪ್ಪಿಸಲು, ವಿದ್ಯುತ್ ಉಪಕರಣಗಳನ್ನು ಅನ್‌ಪ್ಲಗ್ ಮಾಡಲು, ಮರಗಳು ಅಥವಾ ಜಲಮೂಲಗಳಿಂದ ದೂರವಿರಲು ಮತ್ತು ಎಚ್ಚರಿಕೆಯಿಂದ ವಾಹನ ಚಲಾಯಿಸಲು ಸೂಚಿಸಲಾಗಿದೆ.
ನಿನ್ನೆ ಬೆಳಗ್ಗೆ ಬೆಳಿಗ್ಗೆ 8.30 ರಿಂದ 5.30 ರವರೆಗೆ ದಾಖಲಾಗಿರುವ ಮಳೆಯ ದತ್ತಾಂಶವೆಂದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ 106.6 ಮಿ.ಮೀ, ಗದಗದಲ್ಲಿ 70.1 ಮಿ.ಮೀ, ಬೆಂಗಳೂರು ಎಚ್‌ಎಎಲ್ 28.2 ಮಿ.ಮೀ, ಚಿತ್ರದುರ್ಗದಲ್ಲಿ 14.8 ಮಿ.ಮೀ, ಕಲಬುರಗಿಯಲ್ಲಿ 10.4 ಮಿ.ಮೀ ಮತ್ತು ಬೆಂಗಳೂರು ನಗರದಲ್ಲಿ 4.9 ಮಿ.ಮೀ. ಮಳೆಯಾಗಿದೆ.ಹೊನ್ನಾವರದಲ್ಲಿ 87.7 ಮಿ.ಮೀ, ಕಾರವಾರದಲ್ಲಿ 55.4 ಮಿ.ಮೀ, ಬೀದರ್‌ನಲ್ಲಿ 26.2 ಮಿ.ಮೀ ಮತ್ತು ಶಕ್ತಿನಗರದಲ್ಲಿ 11.3 ಮಿ.ಮೀ. ಮಳೆಯಾಗಿದೆ.
ಆಗುಂಬೆಯಲ್ಲಿ 108.5 ಮಿ.ಮೀ, ವಿಜಯಪುರದ ತಿಡಗುಂಡಿಯಲ್ಲಿ 46.5 ಮಿ.ಮೀ ಮತ್ತು ಮಂಗಳೂರಿನಲ್ಲಿ 33 ಮಿ.ಮೀ. ಮಳೆಯಾಗಿದೆ ಎಂದು ವರದಿ ಮಾಡಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ವರದಿಗಳು ಕರಾವಳಿ ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆಯಾಗಿರುವುದನ್ನು ತೋರಿಸುತ್ತದೆ. ಮುಂದಿನ ಕೆಲವು ಗಂಟೆಗಳಲ್ಲಿ ಕರ್ನಾಟಕದಾದ್ಯಂತ ಗುಡುಗು, ಮಿಂಚು ಮತ್ತು ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿಯೊಂದಿಗೆ ಮಧ್ಯಮ ಪ್ರಮಾಣದಲ್ಲಿ ಮಳೆ ಮುಂದುವರಿಯಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
Advertisement