
ಬೆಂಗಳೂರು: ಕಾಂಗ್ರೆಸ್ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತಗಳ್ಳತನ ಮಾಡಿ ಬಿಜೆಪಿ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಸಿದ್ದರಾಮಯ್ಯ ಸಹ 2024ರ ಲೋಕಸಭೆ ಚುನಾವಣೆ ವೇಳೆ ಮತಗಳ್ಳತನವಾಗಿದೆ ಎಂಬ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಇದೀಗ ತಾವು 1991ರ ಲೋಕಸಭಾ ಚುನಾವಣೆಯಲ್ಲಿ ವಂಚನೆಯಿಂದಾಗಿ ಸೋತಿದ್ದಾಗಿ ಹೇಳಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.
ವಕೀವರ ಸಂಘದ ವತಿಯಿಂದ ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಿದ್ದ ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, 1991ರ ಲೋಕಸಭೆ ಚುನಾವಣೆಯಲ್ಲಿ ಮೋಸದಿಂದ ಸೋತಿದ್ದೆ. ಆಗ ಅದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಲು ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಅವರು ನೆರವು ನೀಡಿದ್ದರು ಎಂದು ಸ್ಮರಿಸಿದ್ದರು.
ಮತ ಕಳ್ಳತನ" ಆರೋಪದ ವಿವಾದದ ನಡುವೆ ಸಿಎಂ ಹೇಳಿಕೆ
ರವಿವರ್ಮ ಕುಮಾರ್ ತಮ್ಮಂತಹ ಅನೇಕರಿಗೆ ಕಾನೂನು ನೆರವು ನೀಡಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ರವಿವರ್ಮ ಕುಮಾರ್ ಅಸೋಸಿಯೇಟ್ಸ್ ಸಮಾಜದಲ್ಲಿ ಧ್ವನಿಯಿಲ್ಲದವರಿಗೆ ಹಣ ತೆಗೆದುಕೊಳ್ಳದೆ ಸಹಾಯವನ್ನು ಒದಗಿಸುತ್ತದೆ. ಅವರ ಸಮಾಜವಾದಿ ಮನೋಭಾವ ಇಂದಿನ ಯುವ ವಕೀಲರಿಗೆ ಮಾದರಿಯಾಗಿದೆ. ರೈತ ಹೋರಾಟಗಾರ ಪ್ರೊಫೆಸರ್ ನಂಜುಂಡಸ್ವಾಮಿ ಮತ್ತು ರವಿವರ್ಮ ಕುಮಾರ್ ಸೇರಿದಂತೆ ಅನೇಕ ಯುವಕರು ತಮ್ಮ ಕಾಲೇಜು ದಿನಗಳಲ್ಲಿ ಸಮಾಜವಾದಿ ಸಭೆಯನ್ನು ಸೇರಿದರು. ಅಂದಿನಿಂದಲೇ ನಾವು ಸಮಾಜವಾದಿಗಳು ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು.
ಇದೇ ವೇಳೆ ತಮ್ಮ ವಕೀಲ ವೃತ್ತಿ ಪ್ರಯಾಣವನ್ನು ನೆನಪಿಸಿಕೊಂಡ ಸಿದ್ದರಾಮಯ್ಯ, ಚಿಕ್ಕಬೋರಯ್ಯ ಅವರೊಂದಿಗೆ 10 ವರ್ಷಗಳ ಕಾಲ ಕಿರಿಯ ವಕೀಲರಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು. ಶಾಸಕರಾದ ನಂತರ ವಕೀಲಿ ವೃತ್ತಿ ನಿಲ್ಲಿಸಿದ್ದಾಗಿ ಹೇಳಿದರು. ಆದಾಗ್ಯೂ, ರವಿವರ್ಮ ಕುಮಾರ್ ಸಮಾಜವಾದಿ ಪಕ್ಷದಲ್ಲಿದ್ದಾಗ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಮುಂದುವರೆಸಿದರು. ಅವರು ತಮ್ಮ ಕಾನೂನು ವೃತ್ತಿಜೀವನದ 50 ವರ್ಷಗಳನ್ನು ಪೂರೈಸಿದ್ದು ಅದು ಇನ್ನೂ ಹಲವು ವರ್ಷಗಳ ಕಾಲ ಮುಂದುವರಿಯುತ್ತದೆ ಎಂದು ಆಶಿಸಿದ್ದಾರೆ.
1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಕಾಂಗ್ರೆಸ್‌ನ ಬಸವರಾಜ ಪಾಟೀಲ್ ಅನ್ವರಿ ವಿರುದ್ಧ ಸೋಲನ್ನು ಕಂಡಿದ್ದರು. ಈ ಚುನಾವಣೆಯಲ್ಲಿ ವಂಚನೆಯಿಂದ ತಾವು ಸೋತ್ತಿದ್ದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಆ ಮೂಲಕ ಅಂದು ಕಾಂಗ್ರೆಸ್ ವಂಚನೆ ಮಾಡಿತ್ತು ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
Advertisement