
ಬೆಂಗಳೂರು: ನಿಮ್ಮ ಮೋಸ ಬಯಲು ಮಾಡಿದ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ವಜಾ ಮಾಡುವ ಧೈರ್ಯ ಇದೆಯಾ? ಅಥವಾ ಪ್ರತಾಪ, ಶಿಸ್ತು ಕ್ರಮ ಏನಿದ್ದರೂ ದಲಿತ ನಾಯಕರ ಮೇಲೆ ಪ್ರಯೋಗ ಮಾಡಲು ಮಾತ್ರ ಸೀಮಿತನಾ? ಎಂದು ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಶುಕ್ರವಾರ ಪ್ರಶ್ನೆ ಮಾಡಿದೆ.
ವಕೀವರ ಸಂಘದ ವತಿಯಿಂದ ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಿದ್ದ ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 1991ರ ಲೋಕಸಭೆ ಚುನಾವಣೆಯಲ್ಲಿ ಮೋಸದಿಂದ ಸೋಲಿಸಿದ್ದರು. ಆಗ ಅದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಲು ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಅವರು ನೆರವು ನೀಡಿದ್ದರು ಎಂದು ಸ್ಮರಿಸಿದ್ದರು.
ಈ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, 1991ರಲ್ಲಿ ಸಿದ್ದರಾಮಯ್ಯ ಆವರನ್ನು ಮೋಸದಿಂದ ಸೋಲಿಸಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ.
1991ರಲ್ಲಿ ಸಿದ್ದರಾಮಯ್ಯ ಅವರು ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಸಿದ್ದರಾಮಯ್ಯ ಅವರನ್ನು ಮೋಸದಿಂದ ಸೋಲಿಸಿದ್ದು ಅಂದಿನ ಕಾಂಗ್ರೆಸ್ ಪಕ್ಷ. ಇದೀಗ ಮೋಸದಿಂದ ಸೋಲಿಸಿದ್ದರು ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಪಕ್ಷದ ಮತಗಳ್ಳತನವನ್ನು ಬಯಲು ಮಾಡಿದ್ದಾರೆಂದು ಹೇಳಿದ್ದಾರೆ.
ಮತಗಳ್ಳತನ"ದ ಎಂಬ ಕಪೋಲಕಲ್ಪಿತ ನಾಟಕದ ಬಗ್ಗೆ ಸತ್ಯ ನುಡಿದಿದ್ದ ಮಾಜಿ ಸಚಿವ ರಾಜಣ್ಣ ಅವರನ್ನು ಅತ್ಯಂತ ಅಗೌರವವಾಗಿ ಸಂಪುಟದಿಂದ ವಜಾ ಮಾಡಿದ್ದ ರಾಹುಲ್ ಗಾಂಧಿ ಅವರಿಗೆ, ಈಗ ಕಾಂಗ್ರೆಸ್ ಪಕ್ಷದ ಮೋಸವನ್ನು ಬಯಲು ಮಾಡಿರುವ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ, ಕಾಂಗ್ರೆಸ್ ಪಕ್ಷದಿಂದ ವಜಾ ಮಾಡುವ ಧೈರ್ಯ ಇದೆಯಾ? ಅಥವಾ ನಿಮ್ಮ ಪಕ್ಷದ ಪ್ರತಾಪ, ಶಿಸ್ತು ಕ್ರಮ ಏನಿದ್ದರೂ ದಲಿತ ನಾಯಕರ ಮೇಲೆ ಪ್ರಯೋಗ ಮಾಡಲು ಮಾತ್ರ ಸೀಮಿತನಾ? ಎಂದು ಪ್ರಶ್ನೆ ಮಾಡಿದ್ದಾರೆ.
2018ರಲ್ಲಿ ಸಿದ್ದರಾಮಯ್ಯನವರು ಬಾದಾಮಿಯಲ್ಲಿ ಹೇಗೆ ಮತ ಖರೀದಿ ಮೂಲಕ ಗೆದ್ದರು ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಅವರು ಈಗಾಗಲೇ ಬಯಲು ಮಾಡಿದ್ದಾರೆ. ಪಂಚಾಯಿತಿ ಇಂದ ಪಾರ್ಲಿಮೆಂಟ್ ವರೆಗೆ ಕಾಂಗ್ರೆಸ್ ಪಕ್ಷದ ಏಕಚಕ್ರಾಧಿಪತ್ಯ ಇದ್ದ ಕಾಲದಲ್ಲಿ, "ಆಗೆಲ್ಲಾ ಇವಿಎಂ ಇರಲಿಲ್ಲ, ಒಬ್ರೋ ಇಬ್ರೋ ಕೂತ್ಕೊಂಡು ಒತ್ತು ಬುಡ್ರೋ ಅನ್ನೋರು" ಎಂದು ಕಾಂಗ್ರೆಸ್ ಪಕ್ಷ 60 ವರ್ಷ ಹೇಗೆ ಚುನಾವಣೆ ಗೆಲ್ಲುತ್ತಿತ್ತು ಎನ್ನುವುದನ್ನ ಗೃಹ ಸಚಿವ ಪರಮೇಶ್ವರ್ ಅವರು ಲೀಲಾಜಾಲವಾಗಿ ವಿವರಿಸಿದ್ದಾರೆ.
ನಮ್ಮ ದೇಶದಲ್ಲಿ ಮತಗಳ್ಳತನ, ಚುನಾವಣಾ ಅಕ್ರಮದ ಪಿತಾಮಹ ಯಾರಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮತ್ತು ನೆಹರೂ-ಗಾಂಧಿ ಕುಟುಂಬ. ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ಅವರು ಮಾತನಾಡಿದರೆ ಅದು ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತೆ ಎಂದು ಟೀಕಿಸಿದ್ದಾರೆ.
Advertisement