
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ವ್ಯಾಪ್ತಿಯಲ್ಲಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ, 2019-20 ರಿಂದ 2022-23 ರವರೆಗೆ ಕಾಮಗಾರಿಗಳಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಸಂಪೂರ್ಣವಾದ ತನಿಖೆ ನಡೆಸಲು ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅವರ ವಿಚಾರಣಾ ಆಯೋಗವು ಶನಿವಾರ ರಾಜ್ಯ ಸರ್ಕಾರ ತನ್ನ ತನಿಖಾ ವರದಿಯನ್ನು ಸಲ್ಲಿಸಿದೆ.
ನ್ಯಾಯಮೂರ್ತಿ ನಾಗಮೋಹನ ದಾಸ್ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಬಿಬಿಎಂಪಿ ಅಕ್ರಮದ ತನಿಖಾ ವರದಿಯನ್ನು ಸಲ್ಲಿಸಿದರು.
ಈ ತನಿಖಾ ವರದಿಯು ಅನುಬಂಧಗಳೊಂದಿಗೆ ಒಟ್ಟು 8,900 ಪುಟಗಳನ್ನು ಹೊಂದಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನಿನಂತೆ ಕ್ರಮಕೈಗೊಳ್ಳಲು ಹಾಗೂ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಶಿಫಾರಸು ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ತನಿಖೆ ವೇಳೆ, ರ‍್ಯಾಂಡಮ್ ಆಯ್ಕೆ ಮೂಲಕ 528 ಮತ್ತು ಇತರೆ 233 ಒಟ್ಟು 761 ಪೂರ್ಣಗೊಂಡ ಕಾಮಗಾರಿಗಳ ತನಿಖೆ ನಡೆಸಲಾಗಿದೆ. ಈ ವೇಳೆ, ಕಾಮಗಾರಿಯಲ್ಲಿ ಹಲವು ನ್ಯೂನತೆಗಳನ್ನು ಪತ್ತೆ ಮಾಡಲಾಗಿದೆ ಎಂದು ವರದಿಯಾಗಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಭ್ರಷ್ಟಾಚಾರಗಳ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು 2023ರ ಜುಲೈ 13ರಂದು ಮನವಿ ಸಲ್ಲಿಸಿದ್ದರು. ಅವರ ಮನವಿಗೆ ಸ್ಪಂದಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭದಲ್ಲಿ ತನಿಖೆಗಾಗಿ ನಾಲ್ಕು ವಿಶೇಷ ತನಿಖಾ ಸಮಿತಿಗಳನ್ನು ರಚಿಸಿದ್ದರು. ಆದರೆ, ಆ ಸಮಿತಿಗಳನ್ನು 2023ರ ಡಿಸೆಂಬರ್ 15ರಂದು ಹಿಂಪಡೆದು, ತನಿಖೆಯನ್ನು ನಾಗಮೋಹನ ದಾಸ್ ನೇತೃತ್ವದ ವಿಚಾರಣಾ ಆಯೋಗಕ್ಕೆ ವರ್ಗಾಯಿಸಿದ್ದರು.
Advertisement