
ಬೆಂಗಳೂರು: ಮಾಜಿ ಡಿಜಿಪಿ ಓಂ ಪ್ರಕಾಶ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಪಲ್ಲವಿ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಸೆಷನ್ಸ್ ನ್ಯಾಯಾಲಯ ವಿಸ್ತರಿಸಿದ್ದು, ಉಚಿತ ಕಾನೂನು ನೆರವು ನೀಡುವ ಮೂಲಕ ಅವರು ತಮ್ಮ ಪರವಾಗಿ ವಕೀಲರನ್ನು ಹೊಂದುವ ಅವಕಾಶ ನೀಡಿದೆ.
ಜೈಲಿನಿಂದ ವರ್ಚುವಲ್ ಆಗಿ ಹಾಜರಾದ ಸಮಯದಲ್ಲಿ, ಪಲ್ಲವಿ ಅವರ ಪರವಾಗಿ ವಾದಿಸಲು ವಕೀಲರಿಲ್ಲ ಎಂದು ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಲಾಯಿತು. ಆಗ ನ್ಯಾಯಾಧೀಶರು ಅದರ ಬಗ್ಗೆ ಆಕೆಯನ್ನು ಕೇಳಿದಾಗ, ವಕೀಲರನ್ನು ನೇಮಿಸಿಕೊಳ್ಳಲು ತಾನು ಶಕ್ತಳಲ್ಲ ಎಂದು ಪೀಠಕ್ಕೆ ತಿಳಿಸಿದರು.
ನಂತರ ನ್ಯಾಯಾಲಯವು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA) ಮೂಲಕ ಪಲ್ಲವಿಗೆ ಕಾನೂನು ಸಹಾಯವನ್ನು ಒದಗಿಸುವುದಾಗಿ ಹೇಳಿತು ಮತ್ತು ಅವರು ಇದಕ್ಕೆ ಸಮ್ಮತಿ ಸೂಚಿಸಿದರು.
ಪ್ರಕರಣದ ಬೆಳವಣಿಗೆಗಳ ಕುರಿತು ಪಲ್ಲವಿ ಅವರಿಗೆ ಮಾಹಿತಿ ನೀಡಲು ಮತ್ತು ಅವರೊಂದಿಗೆ ಸಮಾಲೋಚಿಸಲು ವಕೀಲರನ್ನು ನೇಮಿಸಲು DLSA ಗೆ ನಿರ್ದೇಶಿಸಿತು.
ಇದಲ್ಲದೆ, ವಾಸ್ತವಿಕ ದೂರುದಾರರ ಪರವಾಗಿ ವಾದಿಸುತ್ತಿರುವ ವಕೀಲ ವಿನಯ್ ಕುಮಾರ್ ಸಿಂಗ್, ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 338(2) ರ ಅಡಿಯಲ್ಲಿ ಅರ್ಜಿಯೊಂದಿಗೆ ವಕಾಲತ್ ಸಲ್ಲಿಸಿ, ಪ್ರಾಸಿಕ್ಯೂಷನ್‌ಗೆ ಸಹಾಯ ಮಾಡಲು ನ್ಯಾಯಾಲಯದ ಅನುಮತಿ ಕೇಳಿದರು.
ನ್ಯಾಯಾಲಯವು ಈ ಅರ್ಜಿಯನ್ನು ಅಂಗೀಕರಿಸಿತು, ಪ್ರಕರಣದ ವಿಚಾರಣೆಯ ಸಮಯದಲ್ಲಿ ವಿಶೇಷ ಸಾರ್ವಜನಿಕ ಅಭಿಯೋಜಕರ ಜೊತೆಗೆ ಕೆಲಸ ಮಾಡಲು ಅವರಿಗೆ ಅವಕಾಶ ನೀಡಿತು.
ಪಲ್ಲವಿ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮುಂದಿನ ವಿಚಾರಣೆಯವರೆಗೆ ವಿಸ್ತರಿಸಲಾಗಿದ್ದು, ಸೆಪ್ಟೆಂಬರ್ 12ಕ್ಕೆ ವಿಚಾರಣೆಯನ್ನು ಮುಂದೂಡಿತು.
ಏಪ್ರಿಲ್ 20 ರಂದು, 68 ವರ್ಷದ ಐಪಿಎಸ್ ಅಧಿಕಾರಿ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಅವರ ನಿವಾಸದಲ್ಲಿ ಸಾವಿಗೀಡಾಗಿದ್ದರು. ಅವರ ಮಗ ಕಾರ್ತಿಕೇಶ್ ಸಲ್ಲಿಸಿದ ದೂರಿನ ಮೇರೆಗೆ ಅವರ ಪತ್ನಿಯನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಯಿತು.
Advertisement