

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 2 ರಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ತಿಂಗಳುಗಳಿಂದ ನಡೆಯುತ್ತಿರುವ ಅಧಿಕಾರ ಹಗ್ಗಜಗ್ಗಾಟದ ನಂತರ ಒಗ್ಗಟ್ಟು ಪ್ರದರ್ಶಿಸಲು ಮತ್ತು ಬಿಕ್ಕಟ್ಟಿಗೆ ವಿರಾಮ ಘೋಷಿಸಲು ಈ ಪ್ರಯತ್ನ ನಡೆಸಲಿದ್ದಾರೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
ಶನಿವಾರ ಡಿಕೆ ಶಿವಕುಮಾರ್ ಅವರು ಇದೇ ರೀತಿಯ ಉಪಹಾರ ಕೂಟಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ಪಾಲ್ಗೊಂಡು ಒಗ್ಗಟ್ಟಿನ ಮಂತ್ರ ಜಪಿಸಿದ್ದರು.
ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದ ಮೇರೆಗೆ ನಡೆದ ಬ್ರೇಕ್‌ಫಾಸ್ಟ್ ಸಭೆಯ ನಂತರ, ಇಬ್ಬರೂ ನಾಯಕರು ನಮ್ಮ ನಡುವೆ 'ಯಾವುದೇ ಗೊಂದಲ ಇಲ್ಲ' ಎಂದು ಸಾರ್ವಜನಿಕವಾಗಿ ಹೇಳಿದ್ದರು. ರಾಜ್ಯದಲ್ಲಿನ ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವನ್ನು ಅನುಸರಿಸುವುದಾಗಿ ಇಬ್ಬರೂ ಹೇಳಿದ್ದರು.
ಈ ಬೆಳವಣಿಗೆಯನ್ನು ಇಬ್ಬರ ನಡುವಿನ ನಾಯಕತ್ವದ ಜಗಳಕ್ಕೆ ತಡೆಯೊಡ್ಡಲು ಹೈಕಮಾಂಡ್ ತೆಗೆದುಕೊಂಡ ಕ್ರಮವೆಂದು ಪರಿಗಣಿಸಲಾಗಿದೆ ಮತ್ತು ಡಿಸೆಂಬರ್ 8 ರಿಂದ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನಕ್ಕೂ ಮುನ್ನ, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುವ ಸೂಚನೆ ಸಿಕ್ಕಂತಾಗಿದೆ.
'ಶನಿವಾರ ಸಿಎಂ ಹೇಳಿದಂತೆ, ಅವರು ನಾಳೆ ಉಪಾಹಾರಕ್ಕಾಗಿ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ' ಎಂದು ಅಧಿಕೃತ ಮೂಲಗಳು ತಿಳಿಸಿವೆ.
ನವೆಂಬರ್ 20 ರಂದು ಕಾಂಗ್ರೆಸ್ ಸರ್ಕಾರ ತನ್ನ ಐದು ವರ್ಷಗಳ ಅವಧಿಯ ಅರ್ಧವನ್ನು ಪೂರೈಸಿದ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಊಹಾಪೋಹಗಳು ಹರಡಿದ್ದರ ನಡುವೆ, ಆಡಳಿತ ಪಕ್ಷದೊಳಗಿನ ಅಧಿಕಾರ ಜಗಳ ತೀವ್ರಗೊಂಡಿತ್ತು.
Advertisement