

ಮಂಡ್ಯ: ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಅಂತರಾಷ್ಟ್ರೀಯ ಸ್ಯಾಂಡ್ವಿಚ್ ಸ್ನಾತಕೋತರ ಪದವಿಯನ್ನು ತೆರೆಯಲು ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದರು.
ಮಂಡ್ಯದ ವಿ.ಸಿ.ಫಾರಂನಲ್ಲಿ ಆಯೋಜಿಸಿದ್ದ ಕೃಷಿ ಮೇಳ 2025" ನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ, ಕೃಷಿ ವಿವಿಯಲ್ಲಿ ಅಂತರಾಷ್ಟ್ರೀಯ ಸ್ಯಾಂಡ್ವಿಚ್ ಸ್ನಾತಕೋತರ ಪದವಿಯನ್ನು ತೆರೆಯಲು ಕೃಷಿ ವಿಜ್ಞಾನಿಗಳು ಬೇಡಿಕೆ ಇಟ್ಟಿದ್ದಾರೆ. ಈ ಸ್ನಾತಕೋತರ ಪದವಿಯನ್ನು ತೆರೆಯಲು ಪ್ರಯತ್ನ ಪಡುತ್ತೇನೆ. ಕೃಷಿಯ ಕುರಿತಾಗಿ ನನಗೆ ಅಪಾರವಾದ ಕಾಳಜಿ ಇದೆ. ನಮ್ಮ ದೇಶದ ಜಿಡಿಪಿಗೆ ಕೃಷಿ ವಲಯ ಹೆಚ್ಚು ಶ್ರಮಿಸುತ್ತಿದೆ ಎಂದರು.
ನಮ್ಮ ಸರ್ಕಾರ ರೈತರ ಪರವಾಗಿ ಇರುತ್ತದೆ ರೈತರನ್ನು ಸಬಲೀಕರಣ ಮಾಡುವುದು ನಮ್ಮ ಉದ್ದೇಶ. ರಾಜ್ಯದ ಸರ್ಕಾರಿ ಸ್ವಾಮ್ಯದಲ್ಲಿರುವ ಏಕೈಕ ಸಕ್ಕರೆ ಕಾರ್ಖಾನೆಯಾದ ಮೈ ಶುಗರ್ ಅನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ 50 ಕೋಟಿ ಹಣವನ್ನು ನೀಡಿದೆ. ಮೈ ಶುಗರ್ ಸಕ್ಕರೆ ಕಾರ್ಖಾನೆಯ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಿದೆ. ಮೈ ಶುಗರ್ ಕಾರ್ಖಾನೆಗೆ ಹೊಸ ಬಾಯ್ಲಿಂಗ್ ಹೌಸ್ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರ ರಾಜ್ಯದ ಜನರ ಅಭಿವೃದ್ಧಿಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮಂಡ್ಯ ಜಿಲ್ಲೆಯ ಮಹಿಳೆಯರು ಶಕ್ತಿ ಯೋಜನೆ ಅಡಿ 18 ಕೋಟಿ ಬಾರಿ ಉಚಿತ ಪ್ರಯಾಣ ಬೆಳೆಸಿದ್ದಾರೆ. ಜಿಲ್ಲೆಯ 4 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ನ್ನು ಉಚಿತವಾಗಿ ನೀಡಲಾಗುತ್ತಿದೆ. ನಮ್ಮ ರಾಜ್ಯದ ಕಬ್ಬು ಹಾಗೂ ಹೊರ ರಾಜ್ಯದ ಕಬ್ಬಿನ ಗುಣಮಟ್ಟದಲ್ಲಿ ವ್ಯತ್ಯಾಸವಿದೆ, ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ಇದರ ಕುರಿತಾಗಿ ಸಂಶೋಧನೆಯನ್ನು ನಡೆಸಿ ಕಬ್ಬಿನ ಗುಣಮಟ್ಟ ಹೆಚ್ಚಿಸುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು.
ಮಂಡ್ಯ ಕೃಷಿ ಪ್ರಧಾನವಾದ ಜಿಲ್ಲೆ. ರಾಜಕೀಯಕ್ಕೆ ಬರುವ ಮೊದಲು ನಾನು ಸಹ ಕೃಷಿಕನಾಗಿದ್ದೆ. ಮೈಸೂರಿನ ರೈತ ಸಂಘದ ಮೊದಲ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಕೃಷಿಯನ್ನು ವೈಜ್ಞಾನಿಕ ವಿಧಾನದಲ್ಲಿ ಮಾಡಿದಾಗ ಕೃಷಿಯಿಂದ ಹೆಚ್ಚಿನ ಲಾಭಗಳಿಸಬಹುದು. ರೈತರು ತಾವು ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ ಮಾಡಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕೃಷಿ ಕಾರ್ಯಕ್ಕೆ ಮಾನವ ಸಂಪನ್ಮೂಲ ಕಡಿಮೆ ಇದೆ, ಹಾಗಾಗಿ ರೈತರು ಆಧುನಿಕ ಯಂತ್ರೋಪಕರಣಗಳನ್ನು ಬಳೆಸಿ ಕೃಷಿ ಮಾಡಬೇಕು. ಇದರಿಂದ ಸಮಯ ಮತ್ತು ಹಣ ಎರಡು ಉಳಿತಾಯವಾಗುತ್ತದೆ. ಸರ್ಕಾರ ಕೃಷಿ ಯಂತ್ರೋಪಕರಣಗಳು ಸೇರಿದಂತೆ ಅನೇಕ ಸವಲತ್ತುಗಳನ್ನು ನೀಡುತ್ತಾ ಬಂದಿದೆ ಎಂದು ತಿಳಿಸಿದರು.
Advertisement