
ಕೆಂಗೇರಿ ನಮ್ಮ ಮೆಟ್ರೋ ನಿಲ್ದಾಣದಲ್ಲಿ ರೈಲ್ವೆ ಹಳಿಗೆ ಜಿಗಿದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂದು ಬೆಳಗ್ಗೆ 8.15ರ ಸುಮಾರಿಗೆ ಈ ಘಟನೆ ನಡೆದಿದ್ದು ಹೀಗಾಗಿ ನೇರಳೆ ಮಾರ್ಗದಲ್ಲಿ ಕೆಲಕಾಲ ಮೆಟ್ರೋ ಸಂಚಾರ ಸ್ಥಬ್ಧಗೊಂಡಿದ್ದು ಇದೀಗ ಸಹಜ ಸ್ಥಿತಿಗೆ ಮರಳಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ವಿಜಯಪುರದ ದೇವರಹಿಪ್ಪರಗಿಯ ಶಾಂತಗೌಡ ಪಾಟೀಲ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಇಂಜಿನಿಯರ್ ಆಗಿದ್ದ ಶಾಂತಗೌಡ 7 ವರ್ಷಗಳ ಹಿಂದೆ ವಿವಾಹವಾಗಿದ್ದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹಣಕಾಸಿನ ಸಮಸ್ಯೆ, ಮಾನಸಿಕ ಖಿನ್ನತೆಯಿಂದ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕಳೆದೆರಡು ದಿನಗಳಿಂದ ಸುಮಾರು 500ಕ್ಕೂ ಹೆಚ್ಚು ಇಂಡಿಗೊ ವಿಮಾನಗಳ ಹಾರಾಟ ರದ್ದಾಗಿದೆ. ಹೀಗಾಗಿ ಇಂಡಿಗೋ ಏರ್ ಲೈನ್ಸ್ ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣ ಸೇರಿದಂತೆ ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಮಾನಗಳ ಹಾರಾಟ ರದ್ದಾದರೆ ಬದಲಿ ವ್ಯವಸ್ಥೆ ಮಾಡುವಂತೆ ಸಿಬ್ಬಂದಿಯನ್ನು ಒತ್ತಾಯಿಸುತ್ತಿದ್ದಾರೆ. ಆದರೆ ಸಿಬ್ಬಂದಿಗಳು ಅಸಹಾಯಕರಾಗಿ ಕುಳಿತಿದ್ದಾರೆ. ಈ ಮಧ್ಯೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಹೆಚ್ಚಾಗುತ್ತಿದ್ದಂತೆ ಇಂದು ಮಧ್ಯರಾತ್ರಿ 11.59ಕ್ಕೆ ಮುಂಬೈ ಮತ್ತು ದೆಹಲಿಗೆ ತೆರಳಬೇಕಿದ್ದ ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ ಎಂದು ಪ್ರಯಾಣಿಕರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ. ಇಂಡಿಯೋ ವಿಮಾನಗಳ ಹಾರಾಟ ರದ್ದಾಗಿದ್ದರಿಂದ ಹುಬ್ಬಳ್ಳಿಯ ಜೋಡಿಯೊಂದು ಆನ್ ಲೈನ್ ನಲ್ಲಿ ವಿವಾಹವಾಗಬೇಕಾದ ಪರಿಸ್ಥಿತಿ ಉಂಟಾಯಿತು.
ಬೆಂಗಳೂರಿಗೆ ಬಂದಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅಭಿಮಾನಿಗಳತ್ತ ತಮ್ಮ ಮಧ್ಯದ ಬೆರಳು ತೋರಿಸಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ. ಬೆಂಗಳೂರಿನ ಪಬ್ ವೊಂದಕ್ಕೆ ಬಂದಿದ್ದ ಆರ್ಯನ್ ಖಾನ್ ತಮ್ಮನ್ನು ನೋಡಲು ಬಂದಿದ್ದ ಅಭಿಮಾನಿಗಳತ್ತ ಮಧ್ಯದ ಬೆರಳು ತೋರಿಸಿದ್ದರು. ಆರ್ಯನ್ ಖಾನ್ ಅಸಭ್ಯ ವರ್ತನೆ ತೋರಿದ್ದಾರೆ ಎಂದು ಹಿಂದೂ ಮುಖಂಡ ತೇಜಸ್ ಗೌಡ ಎಂಬುವವರು ದೂರು ನೀಡಿದ್ದಾರೆ. ಆರ್ಯನ್ ಖಾನ್ ಜೊತೆಗಿದ್ದ ಕಾಂಗ್ರೆಸ್ ಶಾಸಕ ಹ್ಯಾರಿಸ್ ನಲಪಾಡ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಅವರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಇಬ್ಬರು ಶಾಸಕರ ಪುತ್ರರು ಸಾರ್ವಜನಿಕ ಸ್ಥಳದಲ್ಲಿ ಆರ್ಯನ್ ಖಾನ್ ದುರ್ವರ್ತನೆ ತೋರುತ್ತಿದ್ದಾಗ ನಗುತ್ತಾ ನಿಂತಿದ್ದು, ಅದನ್ನು ತಡೆಯಲು ಪ್ರಯತ್ನಿಸಲಿಲ್ಲ ಎಂದು ಆರೋಪಿಸಲಾಗಿದೆ.
ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ನಾರಾಯಣ ಗುರು ಹಾಗೂ ಮಹಾತ್ಮ ಗಾಂಧಿ ನಡುವಿನ ಸಂವಾದದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮುಂದೆ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹಾಗೂ ಅವರ ಬೆಂಬಲಿಗರು ಸಿಎಂ-ಡಿಸಿಎಂ ಪರ ಕುರಿತು ಘೋಷಣೆ ಕೂಗಿದ್ದರು. ಸಿಎಂ ಸಿದ್ದರಾಮಯ್ಯ-ಡಿಕೆಶಿ ನಡುವಿನ ಕುರ್ಚಿ ಕದನ ಶಾಂತವಾಗಿರುವಾಗಲೇ ಈ ರೀತಿ ಘೋಷಣೆ ಕೂಗಿರುವುದು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಕಾರಣ ಕೇಳಿ ಮಿಥುನ್ ರೈಗೆ ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಎಂದು ಘೋಷಣೆ ಕೂಗಿದ್ದ ಪರಿಷತ್ ಸದಸ್ಯ ಐವಾನ್ ಡಿಸೋಜಾಗೂ ಕಾಂಗ್ರೆಸ್ ಶಿಸ್ತು ಸಮಿತಿ ಸೂಕ್ತ ಕಾರಣ ನೀಡುವಂತೆ ನೋಟಿಸ್ ನೀಡಿದೆ.
ಹಾವೇರಿಯ ಅಕ್ಕಿ ಆಲೂರು ಗ್ರಾಮದಲ್ಲಿರುವ ಸಿಜಿ ಬೆಲ್ಲದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಮತ್ತು ಕೇಸರಿ ಶಾಲುಗಳನ್ನು ಧರಿಸಿ ವಿದ್ಯಾರ್ಥಿಗಳ ಗುಂಪು ತರಗತಿಗಳಿಗೆ ಬಂದಿದ್ದು ಹೊಸ ವಿವಾದ ಭುಗಿಲೆದ್ದಿದೆ. ಕಾಲೇಜು ಆಡಳಿತ ಮಂಡಳಿಯು ಡ್ರೆಸ್ ಕೋಡ್ ವಿಚಾರದ ಬಗ್ಗೆ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿ ಇಂದು ಹಿಂದೂ ವಿದ್ಯಾರ್ಥಿಗಳ ಗುಂಪೊಂದು ಕೇಸರಿ ಶಾಲುಗಳನ್ನು ಧರಿಸಿ ತರಗತಿಗಳಿಗೆ ಪ್ರವೇಶಿಸಿತು. ಕಾಲೇಜು ಸಮವಸ್ತ್ರ ನಿಯಮಗಳನ್ನು ಸಮಾನವಾಗಿ ಜಾರಿಗೊಳಿಸುವಂತೆ ಪದೇಪದೇ ತಿಳಿಸಿದರೂ ಆಡಳಿತ ಮಂಡಳಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಪ್ರಾಂಶುಪಾಲ ವಿರೇಶ್ ಕಮ್ಮೂರ್, ಆಡಳಿತ ಮಂಡಳಿಯೂ ಎಲ್ಲ ವಿದ್ಯಾರ್ಥಿಗಳು ತರಗತಿಯ ಒಳಗೆ ನಿಗದಿತ ಸಮವಸ್ತ್ರವನ್ನು ಧರಿಸಬೇಕೆಂದು ಕಡ್ಡಾಯಗೊಳಿಸುತ್ತದೆ. ಆದರೂ, ಕೆಲವು ವೈಯಕ್ತಿಕ ಸಂದರ್ಭಗಳಲ್ಲಿ ಕೆಲವು ರಿಯಾಯಿತಿಗಳನ್ನು ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
Advertisement