

ಬೆಂಗಳೂರು: ಹುಚ್ಚ ವೆಂಕಟ್- ಈ ಹೆಸರು ಕೇಳಿದೊಡನೆ ಜನರು ಒಂದು ಕ್ಷಣ ಹುಬ್ಬೇರಿಸುವುದು ಖಚಿತ. ಸ್ಯಾಂಡಲ್‌ವುಡ್‌ನಲ್ಲಿ ನಟ, ನಿರ್ದೇಶಕ, ನಿರ್ಮಾಪಕ, ಗಾಯಕ ಎಲ್ಲವೂ ಆಗಿರುವ 'ಹುಚ್ಚ' ವೆಂಕಟ್ ಬಹುದಿನಗಳ ಬಳಿಕ ಜನರ ಮುಂದೆ ಬಂದಿದ್ದಾರೆ.
ಯೂಟ್ಯೂಬ್ ಚಾನೆಲ್ ವೊಂದರಲ್ಲಿ ಪತ್ರಕರ್ತರೊಬ್ಬರು ನಡೆಸಿರುವ ಸಂದರ್ಶನದಲ್ಲಿ ಮಾತನಾಡಿರುವ ಹುಚ್ಚ ವೆಂಕಟ್, ತಮಗಿರುವ ಕಣ್ಣಿನ ಸಮಸ್ಯೆ ಹಾಗೂ ಆರ್ಥಿಕ ಸಮಸ್ಯೆ ಬಗ್ಗೆ ಕಣ್ಣೀರಿಟ್ಟಿದ್ದಾರೆ.
ಸಂದರ್ಶನದಲ್ಲಿ ಗಡುತನದಿಂದ ಮಾತನಾಡಿ ಎಲ್ಲರ ಹುಬ್ಬೇರುವಂತೆ ಮಾಡುತ್ತಿದ್ದ ಹುಚ್ಚ ವೆಂಕಟ್ ಮಾತುಗಳಲ್ಲಿ ಮೃದುತ್ವ ಇರುವುದು ಕಂಡು ಬಂದಿದೆ.
ನಗಬೇಕು... ಅಳುತ್ತಾ, ಅಳುತ್ತಾ.. ನಗಬೇಕು, ಅಳಬೇಕು... ನಗುತ್ತಾ ನಗುತ್ತಾ.. ಅಳಬೇಕೆಂದು ತಮಗಿರುವ ಕಷ್ಟಗಳ ನೆನೆದು ಹುಚ್ಚಾ ವೆಂಕಟ್ ಕಣ್ಣೀರಿಟ್ಟಿದ್ದಾರೆ.
ಇಷ್ಟಕ್ಕೂ ಹುಚ್ಚ ವೆಂಕಟ್'ಗೆ ಆಗಿರುವುದಾದರೂ ಏನು?
ಚೆನ್ನಾಗಿರಬೇಕೆಂದರೆ, ಸಾಕಷ್ಟು ಹೋರಾಟ ಮಾಡಬೇಕು. ಈ ಮೊದಲು ನಾನು ಹೋರಾಟ ಮಾಡುತ್ತಿದ್ದೆ. ಈಗ ಹೋರಾಟ ಮಾಡುತ್ತಿಲ್ಲ. ಸಾಕಷ್ಟು ಕಣ್ಣೀರು ಸುರಿಸುತ್ತಿದ್ದೇನೆ. ಜನರು ಪ್ರೀತಿ ಕೊಡುತ್ತಿದ್ದಾರೆ. ಪ್ರೀತಿ, ಕಣ್ಣೀರು ಬಿಟ್ಟರೆ ಇನ್ನಾವುದರಿಂದಲೂ ಯಾರನ್ನೂ ಗೆಲ್ಲಲು ಸಾಧ್ಯವಿಲ್ಲ.
ಹುಚ್ಚ ಎಂಬ ಹೆಸರೇಕು ಬಂದು ಎಂಬ ಪ್ರಶ್ನೆಗೆ, ನಾನು ಮಾಡುವ ಕೆಲಸವನ್ನು ಹುಚ್ಚು ರೀತಿಯಲ್ಲಿ ಮಾಡುತ್ತಿದ್ದೆ. ನನ್ನ ತಾಯಿ ಹುಚ್ಚನ ತರ ಆಡುತ್ತೀಯಾ ಎಂದು ಹೇಳುತ್ತಿದ್ದರು. ಹೀಗಾಗಿ ನಾನೇ ಹುಚ್ಚವೆಂಕಟ್ ಎಂದು ಹೆಸರಿಟ್ಟುಕೊಂಡೆ. ಬಿಗ್ ಬಾಸ್ ನಲ್ಲಿ ಅದೇ ಫೇಮಸ್ ಆಯಿತು ಎಂದು ಹೇಳಿದ್ದಾರೆ.
ಇದೇ ವೇಳೆ ಕಣ್ಣಿಗೇನಾಯಿತು ಎಂಬ ಪ್ರಶ್ನೆಗೆ ಉತ್ತರಿಸಿ, ಕಣ್ಣಿಗೆ ಪೊರೆ ಬಂದಿದೆ. ಅದಕ್ಕೆ ಆಪರೇಷನ್ ಮಾಡಿಸಬೇಕು ಎಂದು ಹೇಳಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದೇನೆ. ಮುಂದಿನ ತಿಂಗಳು ಆಪರೇಷನ್ ಮಾಡಿಸಬೇಕು. 57 ಸಾವಿರ ಖರ್ಚಾಗಲಿದೆ ಎಂದು ತಿಳಿಸಿದ್ದಾರೆ.
ಹಣ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, ಹಣ ಇಲ್ಲ, ಹೊಂದಿಸುತ್ತಿದ್ದೇನೆ. ಆದರೆ, ಜನರ ಹತ್ತಿರ ಮಾತ್ರ ಕೇಳೋದಿಲ್ಲ. ಜನ ನನಗೆ ಪ್ರೀತಿ, ಕಣ್ಣೀರು ಕೊಡುತ್ತಿದ್ದಾರೆ. ಅಷ್ಟೇ ಸಾಕು. ನಿಮ್ಮ ಹುಚ್ಚ ವೆಂಕಟ್ ನಿಮ್ಮಿಂದ ಬಯಸೋದು ಅಷ್ಟೇ. ಸಾಧ್ಯವಾದರೆ ಬೇರೆಯವರಿಗೆ ಸಹಾಯ ಮಾಡಿ. ನನಗೆ ಸಹಾಯ ಬೇಡ. ನಾನು ತಿನ್ನೋದು ಒಂದು ಹೊತ್ತಿನ ಊಟ ಮಾತ್ರ. ಬೆಳಗ್ಗೆ ತಿಂಡಿ ತಿನ್ನಲ್ಲ, ಮಧ್ಯಾಹ್ನ ಊಟ ಮಾಡುವುದಿಲ್ಲ. ಇದು ನನಗೆ ಮೊದಲಿನಿಂದಲೂ ಇರುವ ಅಭ್ಯಾಸ . ಆದರೆ, ದಿನಕ್ಕೆ 20-30 ಗ್ಲಾಸ್ ಟೀ ಕುಡೀತಿನಿ. ಇದು ಅಮ್ಮನಿಂದ ಬಂದ ಅಭ್ಯಾಸ. ನನ್ನ ತಾಯಿ ಕೂಡ ಟೀ ತುಂಬಾ ಕುಡಿಯೋರು ಎಂದಿದ್ದಾರೆ.
ಇದೇ ವೇಳೆ ಅಕ್ಕ-ಭಾವನ ಮನೆಯಲ್ಲಿರುವುದಾಗಿ ತಿಳಿಸಿರುವ ಹುಚ್ಚಾ ವೆಂಕಟ್ ಅವರು, ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಳಿಕ ಆಶ್ರಮವೊಂದಕ್ಕೆ ದಾನ ನೀಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ನಾನು ಬರೀ 2 ಸಾವಿರ ಕೊಟ್ಟೆ ಎಂದು ಯಾರೂ ಕೂಡ ಅಂದುಕೊಳ್ಳಬಾರದು. ನನ್ನ ಬಳಿ ಹಣವಿಲ್ಲ ಎಂದು ತಿಳಿಸಿದರು.
ಇದೇ ವೇಳೆ ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ತೋರಿಸಿ, ಓದುವಂತೆ ಹೇಳಿದ್ದಾರೆ. ಈ ವೇಳೆ ಅವರ ಬ್ಯಾಂಕ್ ಅಕೌಂಟ್‌ನಲ್ಲಿ 6 ರೂಪಾಯಿ 56 ಪೈಸೆ ಹಣವಿರುವುದು ಕಂಡು ಬಂದಿದೆ.
Advertisement