

ಬೆಂಗಳೂರು: ಆದಾಯ ತೆರಿಗೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಬಿಗ್ ರಿಲೀಫ್ ನೀಡಿದೆ.
ನಟ ಯಶ್ ಅವರ ಆದಾಯ ತೆರಿಗೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಹೈಕೋರ್ಟ್ ನ್ಯಾಯಪೀಠ ನೋಟಿಸ್ ನ್ನು ರದ್ದು ಮಾಡಿದೆ.
2013-14ರಿಂದ 2018-19 ಅವಧಿಯ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆ ನೀಡಿದ್ದ ನೋಟಿಸ್ ಅನ್ನು ಯಶ್ ಹೈಕೋರ್ಟ್ ಅಲ್ಲಿ ಪ್ರಶ್ನೆ ಮಾಡಿದ್ದರು. ಈ ಅರ್ಜಿಯವನ್ನು ವಿಚಾರಣೆ ನಡೆಸಿರುವ ನ್ಯಾಯಾಲಯ, ನೋಟಿಸ್ ನ್ನು ರದ್ದು ಮಾಡಿದೆ.
ಹೊಂಬಾಳೆ ಕನ್ಸ್ಟ್ರಕ್ಷನ್ಸ್ಗೆ ಸಂಬಂಧಿಸಿ ಐಟಿ ಇಲಾಖೆ ತನಿಖೆ ನಡೆಸಿತ್ತು. ಈ ಪ್ರಕರಣದಲ್ಲಿ ನಟ ಯಶ್ ವಾಸಿಸಿದ್ದ ಹೊಸಕೆರೆಹಳ್ಳಿ ಮನೆ, ಅವರು ಬಾಡಿಗೆ ಪಡೆದು ಉಳಿದುಕೊಂಡಿದ್ದ ತಾಜ್ ವೆಸ್ಟ್ ಎಂಡ್ ರೂಮ್ ಶೋಧಿಸಿತ್ತು.
2021ರಲ್ಲಿ ನಟ ಯಶ್ಗೆ ಆದಾಯ ತೆರಿಗೆ ಕಾಯ್ದೆ ಸೆ.153ಸಿ ಅಡಿ ನೋಟಿಸ್ ನೀಡಿತ್ತು. ಇದನ್ನು ಪ್ರಶ್ನಿಸಿ ನಟ ಯಶ್ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.
ಮನೆ ಶೋಧಿಸಿದ ಬಳಿಕವೂ ‘ಶೋಧನೆ ನಡೆಸದ ವ್ಯಕ್ತಿ’ ಎಂದು ಪರಿಗಣಿಸಿ ಐಟಿ ನೋಟಿಸ್ ನೀಡಿದ್ದು ಏಕೆ ಎಂದು ಪ್ರಶ್ನಿಸಿದ ನಟ ಯಶ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
‘ತಮ್ಮ ನಿವಾಸ ಶೋಧಿಸಲಾಗಿದೆ. ಆದರೂ ಶೋಧ ನಡೆಸದೇ ಇರುವವರಿಗೆ ನೀಡುವ 153ಸಿ ನೋಟಿಸ್ ನೀಡಲಾಗಿದೆ. ಇದು ಕಾನೂನು ಬಾಹಿರವೆಂದು’ ಯಶ್ ಪರ ವಕೀಲರು ವಾದಿಸಿದ್ದಾರೆ.
ಈ ನಡುವ ಪ್ರತಿವಾದ ಮಂಡಿಸಿರುವ ತೆರಿಗೆ ಇಲಾಖೆ, ‘ಹೊಂಬಾಳೆ ಕನ್ಸ್ಟ್ರಕ್ಷನ್ನ ವಿಜಯ್ ಕುಮಾರ್ ವಿರುದ್ಧ ಶೋದನೆ ವಾರಂಟ್ ಪಡೆಯಲಾಗಿತ್ತು. ಹೊಂಬಾಳೆಗೆ ಸಂಬಂಧಪಟ್ಟಂತೆ ಮಾತ್ರ ಯಶ್ ನಿವಾಸದಲ್ಲಿ ಶೋಧಿಸಲಾಗಿದೆ. ಹೀಗಾಗಿ ಯಶ್ ಶೋಧನೆಗೊಳಗಾದ ವ್ಯಕ್ತಿಯಲ್ಲ’ ಎಂದು ಐಟಿ ವಾದ ಮಾಡಿದೆ. ವಾದ ಪ್ರತಿವಾದ ಗಮನಿಸಿದ ಕೋರ್ಟ್ ಯಶ್ಗೆ ಐಟಿ ಇಲಾಖೆ ಜಾರಿಗೊಳಿಸಿದ್ದ ನೋಟಿಸ್ನ ರದ್ದು ಮಾಡಿದೆ.
Advertisement