

ಬೆಂಗಳೂರು: ದೇಶಾದ್ಯಂತ ಇಂಡಿಗೋ ವಿಮಾನಗಳ ರದ್ದತಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಶನಿವಾರ ಕೇಂದ್ರ, ಆಗ್ನೇಯ ಮತ್ತು ದಕ್ಷಿಣ ರೈಲ್ವೆಗಳ ಸಹಯೋಗದೊಂದಿಗೆ ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಿದೆ.
ಬೆಂಗಳೂರು- ಚೆನ್ನೈ, ಬೆಂಗಳೂರು- ಪುಣೆ, ಯಶವಂತಪುರ-ಹಜರತ್ ನಿಜಾಮುದ್ದೀನ್, ಶಾಲಿಮಾರ್-ಯಲಹಂಕ ಮತ್ತು ಎರ್ನಾಕುಲಂ- ಯಲಹಂಕ ಸೇರಿದಂತೆ ಹೆಚ್ಚಿನ ಬೇಡಿಕೆಯಲ್ಲಿರುವ ಮಾರ್ಗಗಳಲ್ಲಿ ಡಿಸೆಂಬರ್ 6 ಮತ್ತು 10 ರ ನಡುವೆ ವಿಶೇಷ ರೈಲುಗಳು ಕಾರ್ಯನಿರ್ವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕೃತ ಹೇಳಿಕೆಯ ಪ್ರಕಾರ, ಚೆನ್ನೈ ಎಗ್ಮೋರ್ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ರೈಲು ಸಂಖ್ಯೆ 06257/06258, ಬೆಂಗಳೂರು ಮತ್ತು ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ 06259/06260 ರೈಲು ಮತ್ತು ಬೆಂಗಳೂರು ಮತ್ತು ಪುಣೆ ನಡುವೆ 06263/06264 ರೈಲುಗಳನ್ನು ನೈರುತ್ಯ ರೈಲ್ವೆ ಓಡಿಸಲಿದೆ.
ಕೇಂದ್ರ ರೈಲ್ವೆ ಪುಣೆ ಮತ್ತು ಬೆಂಗಳೂರು ನಡುವೆ ರೈಲು ಸಂಖ್ಯೆ 01413/01414 ಓಡಿಸಲಿದ್ದು, ಆಗ್ನೇಯ ರೈಲ್ವೆ ಶಾಲಿಮಾರ್ ಮತ್ತು ಯಲಹಂಕ ನಡುವೆ ರೈಲು ಸಂಖ್ಯೆ 08073/08074 ಮತ್ತು ದಕ್ಷಿಣ ರೈಲ್ವೆ ಎರ್ನಾಕುಲಂ ಮತ್ತು ಯಲಹಂಕ ನಡುವೆ ರೈಲು ಸಂಖ್ಯೆ 06147/06148 ಅನ್ನು ಓಡಿಸಲಿದೆ ಎಂದು ಹೇಳಿಕೆ ತಿಳಿಸಿದೆ.
ಪ್ರಯಾಣಿಕರು ರೈಲುಗಳ ಹೊಸ ವೇಳಾಪಟ್ಟಿಯನ್ನು ಪರಿಶೀಲಿಸಲು ಹಾಗೂ ನಿಲ್ದಾಣಗಳಿಗೆ ಮುಂಚಿತವಾಗಿ ಬರಲು ನೈರುತ್ಯ ರೈಲ್ವೆ ಸೂಚಿಸಿದೆ.ಸತತ ಐದು ದಿನಗಳಿಂದ ಇಂಡಿಗೋ ವಿಮಾನ ರದ್ದತಿಯಿಂದ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಅನೇಕ ಸಂದರ್ಭಗಳಲ್ಲಿ ಲಗ್ಗೇಜುಗಳು ಕಳೆದುಹೋಗಿವೆ.
Advertisement