

ಇಂಡಿಗೋ ವಿಮಾನ ಹಾರಾಟ ರದ್ದು ಇಂದು 5ನೇ ದಿನಕ್ಕೆ ಕಾಲಿಟ್ಟಿದ್ದು, ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡು ವಿಪರೀತ ಕಷ್ಟಪಡುತ್ತಿದ್ದಾರೆ. ವ್ಯಾಪಕವಾಗಿ ವಿಮಾನ ಸೇವೆ ಅಡಚಣೆ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ ಉನ್ನತ ಮಟ್ಟದ ತನಿಖೆಯನ್ನು ಪ್ರಾರಂಭಿಸಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯದ ಟಿಪ್ಪಣಿಯಲ್ಲಿ, "ಆಂತರಿಕ ಮೇಲ್ವಿಚಾರಣೆ, ಕಾರ್ಯಾಚರಣೆಯ ಸಿದ್ಧತೆ ಮತ್ತು ಅನುಸರಣೆ ಯೋಜನೆಯಲ್ಲಿನ ದೋಷಗಳು" ವಿಚಾರಣೆಗೆ ಕಾರಣವಾಗಿವೆ ಎಂದು ಹೇಳಲಾಗಿದೆ.
ಉನ್ನತ ಮಟ್ಟದ ಸಮಿತಿ ಪರಿಶೀಲನೆ
ವಿಮಾನ ನಿಲ್ದಾಣಗಳಲ್ಲಿ ಅಸ್ತವ್ಯಸ್ತವಾಗಿರುವ ದೃಶ್ಯಗಳಿಗೆ ಕಾರಣವಾದ ಸಂದರ್ಭಗಳ ಸಮಗ್ರ ಪರಿಶೀಲನೆ ಮತ್ತು ಮೌಲ್ಯಮಾಪನವನ್ನು ಡಿಜಿಸಿಎ ಜಂಟಿ ಮಹಾನಿರ್ದೇಶಕ ಸಂಜಯ್ ಕೆ ಬ್ರಹ್ಮಣೆ ನೇತೃತ್ವದ ನಾಲ್ವರು ಸದಸ್ಯರ ಸಮಿತಿಯು ಕೈಗೊಳ್ಳುತ್ತದೆ. ಇತರ ಸದಸ್ಯರಲ್ಲಿ ಉಪ ಮಹಾನಿರ್ದೇಶಕ ಅಮಿತ್ ಗುಪ್ತಾ; ಹಿರಿಯ ವಿಮಾನ ಕಾರ್ಯಾಚರಣೆ ನಿರೀಕ್ಷಕ (ಎಸ್‌ಎಫ್‌ಒಐ) ಕ್ಯಾಪ್ಟನ್ ಕಪಿಲ್ ಮಾಂಗ್ಲಿಕ್ ಮತ್ತು ಎಫ್‌ಒಐ ಕ್ಯಾಪ್ಟನ್ ಲೋಕೇಶ್ ರಾಂಪಾಲ್ ಸೇರಿದ್ದಾರೆ.
ತನಿಖೆಯು, ಇಂಡಿಗೋ ವಿಮಾನ ಸೇವೆಯಲ್ಲಿ ಏನು ತಪ್ಪಾಗಿದೆ ಎಂಬುದನ್ನು ಪರಿಶೀಲಿಸುತ್ತದೆ, ಅಗತ್ಯವಿರುವಲ್ಲಿ ಜವಾಬ್ದಾರಿಯನ್ನು ವಹಿಸುತ್ತದೆ. ಮುಂಬರುವ ದಿನಗಳಲ್ಲಿ ಇದೇ ರೀತಿಯ ಘಟನೆಗಳನ್ನು ತಡೆಗಟ್ಟಲು ಕ್ರಮಗಳನ್ನು ಶಿಫಾರಸು ಮಾಡುತ್ತದೆ. ಪ್ರಯಾಣಿಕರು ಮತ್ತೆ ಅಂತಹ ತೊಂದರೆಗಳನ್ನು ಎದುರಿಸದಂತೆ ನೋಡಿಕೊಳ್ಳುತ್ತದೆ ಎಂದು ಸರ್ಕಾರ ಹೇಳಿದೆ.
ಇಷ್ಟೊಂದು ವಿಮಾನ ಏಕೆ ರದ್ದುಗೊಂಡಿತು?
ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ನಾಗರಿಕ ವಿಮಾನಯಾನ ಕಾರ್ಯಾಚರಣೆಗಳಿಗಾಗಿ ಹೊಸ ವಿಮಾನ ಕರ್ತವ್ಯ ಸಮಯ ಮಿತಿಗಳನ್ನು (FDTL) ಜಾರಿಗೆ ತಂದ ನಂತರ ಇಂಡಿಗೋ 750 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದ ನಂತರ ದೇಶಾದ್ಯಂತ ಪ್ರಯಾಣಿಕರಿಗೆ ತೀವ್ರ ಅಡಚಣೆಯುಂಟಾಯಿತು.
ಕ್ಷಮೆ ಕೇಳಿದ ಇಂಡಿಗೋ
ಸಿಬ್ಬಂದಿ ಯೋಜನೆಯಲ್ಲಿನ ತಪ್ಪು ಲೆಕ್ಕಾಚಾರಗಳಿಂದಾಗಿ ಈ ಅವ್ಯವಸ್ಥೆ ಉಂಟಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ. ಅನಾನುಕೂಲತೆಗಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ. ನಮ್ಮ ಪ್ರತಿಯೊಬ್ಬ ಗ್ರಾಹಕರ ಬಗ್ಗೆ ನಮಗೆ ಕಾಳಜಿಯಿದೆ, ಈ ಘಟನೆ ನಡೆದಿದ್ದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ.
ನಮ್ಮ ಮುಂಚೂಣಿಯ ಸಿಬ್ಬಂದಿ ಮತ್ತು ಇಡೀ ತಂಡವು ಸಾಮಾನ್ಯ ಕಾರ್ಯಾಚರಣೆಗಳನ್ನು ಮರುಸ್ಥಾಪಿಸಲು ಮತ್ತು ಪ್ರತಿಯೊಬ್ಬ ಗ್ರಾಹಕರಿಗೆ ಕಾಳಜಿ ಮತ್ತು ಗೌರವದಿಂದ ಸಹಾಯ ಮಾಡಲು ಸಮರ್ಪಿತವಾಗಿದೆ. ಈ ಕಷ್ಟದ ಸಮಯದಲ್ಲಿ ನಿಮ್ಮ ತಾಳ್ಮೆ, ತಿಳುವಳಿಕೆ ಮತ್ತು ದಯೆಗೆ ಧನ್ಯವಾದಗಳು. ಪ್ರಗತಿಯ ಕುರಿತು ನಾವು ನಿಮ್ಮನ್ನು ನಿರಂತರವಾಗಿ ಸಂಪರ್ಕಿಸಿ ಮಾಹಿತಿ ನೀಡುತ್ತೇವೆ ಎಂದು ವಿಮಾನಯಾನ ಸಂಸ್ಥೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
DGCA ಹೊಸ FDTL ಮಾನದಂಡಗಳಲ್ಲಿ ಬದಲಾವಣೆ
ಇಂಡಿಗೋ ವಿಮಾನ ಹಾರಾಟದಲ್ಲಿನ ವ್ಯತ್ಯಯ ಇಂದು ಐದನೇ ದಿನಕ್ಕೆ ಕಾಲಿಟ್ಟಿದ್ದು, ನಾಗರಿಕ ವಿಮಾನಯಾನ ನಿರ್ದೇಶನಾಲಯ ಹೊಸ ಎಫ್ ಡಿಟಿಎಲ್ ಮಾನದಂಡಗಳ ಕೆಲವು ಭಾಗಗಳನ್ನು ಹಿಂಪಡೆದಿದೆ. ವಿಮಾನಯಾನ ಸಂಸ್ಥೆಗಳಿಗೆ ಒಂದು ಬಾರಿ ತಾತ್ಕಾಲಿಕ ವಿನಾಯಿತಿ ನೀಡಿದೆ. ಹೊಸದಾಗಿ ಜಾರಿಗೆ ತಂದಿರುವ ನಿಯಮಗಳು ಪೈಲಟ್‌ಗಳ ವಾರದ ವಿಶ್ರಾಂತಿ ಸಮಯವನ್ನು 36 ರಿಂದ 48 ಕ್ಕೆ ಹೆಚ್ಚಿಸಿವೆ ಮತ್ತು ರಾತ್ರಿ ವಿಮಾನ ನಿಲ್ದಾಣಗಳಲ್ಲಿ ಬಂದಿಳಿಯುವ ಸಂಖ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ.
ಪ್ರಯಾಣಿಕರ ಬೆಂಬಲ ಕ್ರಮಗಳನ್ನು ಅನುಸರಿಸಲು ಸರ್ಕಾರ ನಿರ್ದೇಶನ
ಪ್ರಯಾಣಿಕರು ತಾವಿರುವಲ್ಲಿಂದ ನೈಜ-ಸಮಯದ ವಿಮಾನ ಹಾರಾಟದ ಸ್ಥಿತಿಗತಿಗಳನ್ನು ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುವ ಆನ್‌ಲೈನ್ ಮಾಹಿತಿ ವ್ಯವಸ್ಥೆಗಳ ಮೂಲಕ ನಿಯಮಿತ ಮತ್ತು ನಿಖರವಾದ ಮಾಹಿತಿ ಒದಗಿಸಲು ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ.
ಯಾವುದೇ ವಿಮಾನ ರದ್ದತಿಯ ಸಂದರ್ಭದಲ್ಲಿ, ಪ್ರಯಾಣಿಕರು ವಿನಂತಿಯನ್ನು ಮಾಡುವ ಅಗತ್ಯವಿಲ್ಲದೆ, ವಿಮಾನಯಾನ ಸಂಸ್ಥೆಗಳು ಸ್ವಯಂಚಾಲಿತವಾಗಿ ಪೂರ್ಣ ಮರುಪಾವತಿಯನ್ನು ನೀಡಬೇಕಾಗುತ್ತದೆ.
ದೀರ್ಘಕಾಲದ ವಿಳಂಬದಿಂದಾಗಿ ಸಿಲುಕಿಕೊಂಡಿರುವ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು ನೇರವಾಗಿ ಹೋಟೆಲ್ ವಸತಿ ಮತ್ತು ಊಟ ತಿಂಡಿಯ ವ್ಯವಸ್ಥೆ ಮಾಡಬೇಕಿದೆ.
ನಾಗರಿಕ ವಿಮಾನಯಾನ ಸಚಿವಾಲಯವು ಸಮಸ್ಯೆಗಳ ತಕ್ಷಣದ ಪರಿಹಾರಕ್ಕಾಗಿ 24×7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ, ಈ ಕೆಳಗಿನ ಫೋನ್ ಸಂಖ್ಯೆ ಹೊಂದಿದೆ:
011-24610843
011-24693963
096503-91859
Advertisement