

ಕಲಬುರಗಿ: ಅತಿವೃಷ್ಟಿಯಿಂದ ಸಂಪೂರ್ಣ ಬೆಳೆ ಹಾನಿಯಾಗಿದ್ದರೂ ರೈತರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಮತ್ತು ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ಬಿಜೆಪಿ ಭಾನುವಾರ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿತು.
ಎನ್ ಡಿಆರ್ ಎಫ್ ನ ನಿಯಮಾವಳಿ ಪ್ರಕಾರ ಪ್ರತಿ ಹೆಕ್ಟೇರ್ ಗೆ 8, 500 ನಂತೆ ಎರಡು ಹೆಕ್ಟೇರ್ ಗೆ ಕೇಂದ್ರ ಸರ್ಕಾರ 1,700 ರೂ ನೀಡುತ್ತದೆ. ಇನ್ನೂ ಇದರಷ್ಟೇ ರಾಜ್ಯ ಸರ್ಕಾರ 1700 ರೂ ನೀಡಿದರೆ ಐದು ಎಕರೆ ಭೂಮಿ ಇರುವ ರೈತನಿಗೆ 3400 ಪರಿಹಾರ ದೊರಕಬೇಕು. ಆದರೆ ರಾಜ್ಯ ಸರ್ಕಾರ ಬಿಡಿಗಾಸು ನೀಡಿ ಕೈ ತೊಳೆದುಕೊಂಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪರಿಹಾರ ನೀಡಲು ಸರ್ಕಾರದ ಬಳಿ ಹಣ ಇಲ್ಲವೇ? ಸರ್ಕಾರ ದಿವಾಳಿಯಾಗಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಲಿನ ಪ್ರೋತ್ಸಾಹ ಧನವನ್ನು 5 ರೂ.ನಿಂದ 7 ರೂ.ಗೆ ಹೆಚ್ಚಿಸಬೇಕು. 620 ಕೋಟಿ ರೂ. ಪ್ರೋತ್ಸಾಹ ಧನದ ಬಾಕಿ ಹಣ ಬಿಡುಗಡೆ ಮಾಡಬೇಕು. ಅಲ್ಲದೇ ಕಬ್ಬಿಗೆ ಪ್ರತಿ ಟನ್ ಗೆ 3300 ರೂ. ಬೆಂಬಲ ಬೆಲೆ ನಿಗದಿಮಾಡಿರುವುದನ್ನು ರಾಜ್ಯಾದ್ಯಂತ ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಬೃಹತ್ ಪ್ರತಿಭಟನೆ ನಡೆಸಿ ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
Advertisement