

ಬೆಳಗಾವಿ: ಕುಂದಾನಗರಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ವಿಧಾನ ಮಂಡಲ ಉಭಯ ಸದನಗಳ ಚಳಿಗಾಲದ ಅಧಿವೇಶನ ಆರಂಭವಾಗಿದೆ.
ಇಂದು ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ʻವೃಕ್ಷಮಾತೆʼ ಸಾಲುಮರದ ತಿಮ್ಮಕ್ಕ, ಮಾಜಿ ಸಚಿವ ಎಚ್ ವೈ ಮೇಟಿ ಸೇರಿದಂತೆ ಇತ್ತೀಚಿಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ಉತ್ತರ, ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಪರಿಹಾರಕ್ಕೆ ಬುಧವಾರ, ಗುರುವಾರ ಮೀಸಲು
ಅಧಿವೇಶನದಲ್ಲಿ ಬುಧವಾರ ಮತ್ತು ಗುರುವಾರ ಪೂರ್ತಿ ದಿನದ ಕಲಾಪವನ್ನು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗೆ ಮೀಸಲಿಡಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದ್ದಾರೆ.
ಇಂದು ಸುವರ್ಣಸೌಧದ ಎರಡನೇ ಮಹಡಿಯ ಕೊಠಡಿ ಸಂಖ್ಯೆ 238ರಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಹೊರಟ್ಟಿ, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ 145ನೇ ಅಧಿವೇಶನದಲ್ಲಿ 6 ಗಂಟೆ 35 ನಿಮಿಷ ಚರ್ಚೆಯಾಗಿದ್ದು, 19 ಜನ ಪರಿಷತ್ ಶಾಸಕರು ಮಾತನಾಡಿದ್ದಾರೆ ಎಂದರು.
151ನೇ ಅಧಿವೇಶನದಲ್ಲಿ 1 ಗಂಟೆ 40 ನಿಮಿಷ ಚರ್ಚೆಯಾಗಿದ್ದು, 6 ಜನ ಪರಿಷತ್ ಶಾಸಕರು ಮಾತನಾಡಿದ್ದಾರೆ. 154ನೇ ಅಧಿವೇಶನದಲ್ಲಿ 5 ಗಂಟೆ 12 ನಿಮಿಷ ಚರ್ಚೆಯಾಗಿದ್ದು, 11 ಜನ ಪರಿಷತ್ ಶಾಸಕರು ಮಾತನಾಡಿದ್ದಾರೆ. ಅದೇ ರೀತಿ ಈ ಬಾರಿಯ ಅಧಿವೇಶನದಲ್ಲಿ ಸಹ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗೆ ವಿಶೇಷ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
Advertisement