

ಮಂಡ್ಯ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದು ಬಳಿಕ ಹಳ್ಳಕ್ಕೆ ಬಿದ್ದಿದ್ದು, ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ತಿಟ್ಟನಹೊಸಹಳ್ಳಿ ಮತ್ತು ಎ. ನಾಗತಿಹಳ್ಳಿ ನಡುವೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಈ ಅಪಘಾತ ಸಂಭವಿಸಿದೆ.
ಮೃತರನ್ನು ಸರೋಜಮ್ಮ(38), ಅವರ ಪತಿ ಸಿದ್ದೇಗೌಡ(45) ಮತ್ತು ಸಾವಿತ್ರಮ್ಮ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಚಿಕ್ಕಮಗಳೂರಿನವರು. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಬಿಂಡಿಗನವಿಲೆ ಪೊಲೀಸ್ ಠಾಣೆಯ ಪಿಎಸ್ಐ ಮಾರುತಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಸಹಾಯದಿಂದ ಸಿದ್ದೇಗೌಡ ಮತ್ತು ಸರೋಜಮ್ಮ ಅವರ ಶವಗಳನ್ನು ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.
ನಂತರ, ಕಾರು ಬಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿರುವ ಹತ್ತಿರದ ಪೊದೆಗಳಲ್ಲಿ ಸಾವಿತ್ರಮ್ಮ ಅವರ ಶವ ಪತ್ತೆಯಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಅದೇ ಆಸ್ಪತ್ರೆಗೆ ಕಳುಹಿಸಲಾಗಿದೆ.
ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಎಸ್ಪಿ ಇ ಸಿ ತಿಮ್ಮಯ್ಯ, ಡಿವೈಎಸ್ಪಿ ಬಿ ಚಲುವರಾಜು, ಸಿಪಿಐ ಹೇಮಂತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement