

ಬೆಂಗಳೂರು: ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯ 1,777 ಎಕರೆ ಜಮೀನನ್ನು 'ಶಾಶ್ವತ ವಿಶೇಷ ಕೃಷಿ ವಲಯ' ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಈ ಕ್ರಮವು ಭೂಮಾಲೀಕರ ಹಕ್ಕುಗಳನ್ನು ನಿರ್ಬಂಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ರೈತರು ಯಾವುದೇ ನಿರ್ಬಂಧಗಳಿಲ್ಲದೆ ತಮ್ಮ ಭೂಮಿಯನ್ನು ಮಾರಾಟ ಮಾಡಲು ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಎಂದು ಹೇಳಿದರು.
ಜಮೀನು ಮಾರಾಟದ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ ಎಂಬ ವರದಿಗಳ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಸೆಲ್ವಕುಮಾರ್, ವದಂತಿಗಳು ಅಥವಾ ಸುಳ್ಳು ನಿರೂಪಣೆಗಳಿಂದ ದಾರಿ ತಪ್ಪಬಾರದು ಎಂದು ರೈತರನ್ನು ಒತ್ತಾಯಿಸಿದರು. ಈ ಗ್ರಾಮಗಳ ರೈತರು ಕೃಷಿಯನ್ನು ಮುಂದುವರಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ. ಸರ್ಕಾರದ ಈ ನಿರ್ಧಾರವು ರೈತರಿಗೆ ಹಾನಿ ಮಾಡುತ್ತದೆ ಎಂಬ ಯಾವುದೇ ಹೇಳಿಕೆ ಸುಳ್ಳು ಎಂದು ಸೆಲ್ವಕುಮಾರ್ ತಿಳಿಸಿದ್ದಾರೆ.
ಕೃಷಿ ಭೂಮಿಯ ರಿಯಲ್ ಎಸ್ಟೇಟ್ ದುರುಪಯೋಗವನ್ನು ತಡೆಗಟ್ಟುವುದು ಮತ್ತು ಡೆವಲಪರ್‌ಗಳು ರೈತರನ್ನು ಶೋಷಿಸುವುದನ್ನು ತಡೆಯುವುದು ಅಧಿಸೂಚನೆಯ ಹಿಂದಿನ ಉದ್ದೇಶವಾಗಿದೆ. ನಾವು ರೈತರ ಸ್ವಾತಂತ್ರ್ಯ ಅಥವಾ ಭೂಮಿ ಮಾರಾಟ ಮಾಡುವ ಹಕ್ಕನ್ನು ಕಸಿದುಕೊಂಡಿಲ್ಲ. ಮೂಲತಃ ದೇವನಹಳ್ಳಿ ಬಳಿಯ ಭೂಮಿಯನ್ನು ಏರೋಸ್ಪೇಸ್ ಪಾರ್ಕ್‌ಗಾಗಿ ಮೀಸಲಿಡಲಾಗಿತ್ತು. ಆದಾಗ್ಯೂ, ರೈತರು ಆಕ್ಷೇಪಿಸಿದ ನಂತರ ಸರ್ಕಾರ ಸ್ವಾಧೀನ ಯೋಜನೆಯನ್ನು ಹಿಂತೆಗೆದುಕೊಂಡಿದ್ದು ಈಗ ಆ ಪ್ರದೇಶವನ್ನು ಕೃಷಿಗಾಗಿ ಪ್ರತ್ಯೇಕವಾಗಿ ಕಾಯ್ದಿರಿಸಿದೆ ಎಂದರು.
ರೈತರು ಸ್ವಯಂಪ್ರೇರಣೆಯಿಂದ ಸರ್ಕಾರಕ್ಕೆ ತಮ್ಮ ಜಮೀನನ್ನು ಮಾರಾಟ ಮಾಡಬಹುದು. ಜಮೀನು ಬೆಲೆ ನಿರ್ಧಾರ ಸಮಿತಿಯ ಮೌಲ್ಯಮಾಪನದ ಆಧಾರದ ಮೇಲೆ ಪರಿಹಾರವನ್ನು ನೀಡಲಾಗುತ್ತದೆ. ಸರ್ಕಾರಕ್ಕೆ ಮಾತ್ರ ಮಾರಾಟ ಮಾಡಬೇಕೆಂಬ ಷರತ್ತು ಹಾಕಿಲ್ಲ ಎಂದು ಸೆಲ್ವಕುಮಾರ್ ಹೇಳಿದರು.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭೂಮಿಯನ್ನು ಡಿನೋಟಿಫೈ ಮಾಡಿ ಕೃಷಿ ಚಟುವಟಿಕೆಗಾಗಿ ಉಳಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಇನ್ನು 'ಶಾಶ್ವತ ವಿಶೇಷ ಕೃಷಿ ವಲಯ' ಎಂಬ ಹೊಸ ಘೋಷಣೆಯೂ ರೈತರಿಗೆ ಹೆಚ್ಚುವರಿ ಪ್ರಯೋಜನಗಳನ್ನು ವಿಸ್ತರಿಸುತ್ತದೆ. ಈ ಪ್ರದೇಶದಲ್ಲಿ ಕೃಷಿ ಮೂಲಸೌಕರ್ಯವನ್ನು ಬಲಪಡಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.
Advertisement