

ಬೆಳಗಾವಿ: ಗ್ಯಾರಂಟಿ ಯೋಜನೆಗಳಿಂದಲೇ ರಾಜ್ಯದ ಜನತೆಯ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ, ಗ್ಯಾರಂಟಿ ಯೋಜನೆಗಳ ಜೊತೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಕೂಡ ಆಗಬೇಕು ಎಂಬುದನ್ನು ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ಶಾಸಕರು ಅಭಿಪ್ರಾಯ ಹೊರಹಾಕಿದ್ದಾರೆ ಎಂದು ಹಿರಿಯ ಶಾಸಕ ಕೆ ಎನ್ ರಾಜಣ್ಣ ಹೇಳಿದ್ದಾರೆ.
ಇಂದು ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಜೊತೆಜೊತೆಗೆ ಅಭಿವೃದ್ಧಿ ಕೆಲಸಗಳು ಕೂಡ ಆದರೆ ನಮಗೆ ಒಳ್ಳೆಯ ಹೆಸರು ಬರುತ್ತದೆ ಎಂಬ ಸಲಹೆ ನೀಡಲಾಗಿದೆ ಎಂದರು.
ಎಐಸಿಸಿ ಅಧ್ಯಕ್ಷರ ಸೂಚನೆಯಂತೆ ಯಾವ ಮಂತ್ರಿಗಳೂ, ಶಾಸಕರು ಸಿಎಂ ಬದಲಾವಣೆ ಬಗ್ಗೆ ಚರ್ಚೆಯೂ ಮಾಡಬಾರದು, ಪ್ರಸ್ತಾಪ ಕೂಡ ಮಾಡಬಾರದು ಎಂದು ಬಂದಿದೆ. ಹಾಗಾಗಿ ನಾಯಕತ್ವ ಬದಲಾವಣೆ ವಿಚಾರವಾಗಿ ಯಾವ ಪ್ರಸ್ತಾಪನೂ ಇಲ್ಲ, ಚರ್ಚೆಯೂ ಶಾಸಕಾಂಗ ಸಭೆಯಲ್ಲಿ ಆಗಿಲ್ಲ, ಅದರ ಪುನರುಚ್ಛಾರದ ಅಗತ್ಯವೂ ಇಲ್ಲ ಎಂದರು.
ಬಿಜೆಪಿ ಲೇವಡಿ: ಇನ್ನೊಂದೆಡೆ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ಶಾಸಕರೇ ವಿರೋಧಿಸುತ್ತಿದ್ದಾರೆ, ಅವರಿಗೇ ಈಗ ಅದರ ನ್ಯೂನತೆಗಳ ಬಗ್ಗೆ ಅರ್ಥವಾಗುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಲೇವಡಿ ಮಾಡಿದೆ.
Advertisement