

ಬೆಳಗಾವಿ: ರಾಜ್ಯ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ರಾಜ್ಯ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ.
ಗುರುವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಲು ಕೆಲ ಷರತ್ತುಗಳ ಅನ್ವಯ ಅನುಮತಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದೆ ಎಂದು ತಿಳಿದುಬಂದಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಸಲು ಜನಾಭಿಪ್ರಾಯ ಸಂಗ್ರಹದ ಜೊತೆಗೆಯಲ್ಲಿ ನಿಯಮಗಳನ್ನು ರೂಪಿಸಲು ಗೃಹ ಸಚಿವರಿಗೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ.
ಕಾಲ್ತುಳಿತ ದುರಂತ ಬಳಿಕ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆದಿರಲಿಲ್ಲ. ಆದರೆ, ಇದೀಗ ನಿವೃತ್ತ ನ್ಯಾ. ಮೈಕಲ್ ಡಿ ಕುನ್ಹಾ ವರದಿ ಆಧರಿಸಿ ಷರತ್ತುಗಳ ಅನ್ವ. ಕ್ರಿಕೆಟ್ ಪಂದ್ಯಗಳನ್ನು ಆಡಿಸಲು ಸರ್ಕಾರ ಅನುಮತಿ ನೀಡಿದ್ದು, ಭದ್ರತೆ ಜವಾಬ್ದಾರಿಯನ್ನು ಗೃಹ ಇಲಾಖೆಗೆ ನೀಡಲಾಗಿದೆ.
ಬುಧವಾರ ಬೆಳಗಾವಿಯ ಸರ್ಕಿಟ್ ಹೌಸ್‌ನಲ್ಲಿ ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ತಮ್ಮನ್ನು ಭೇಟಿ ಮಾಡಿದ ನಂತರ ಮಾತನಾಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ನಮಗೆ ಕ್ರಿಕೆಟ್ ಟೂರ್ನಿಗಳನ್ನು ನಿಲ್ಲಿಸಬೇಕು ಎನ್ನುವ ಯಾವುದೇ ಉದ್ದೇಶವಿಲ್ಲ. ಆದರೆ ಜನಜಂಗುಳಿಯ ನಿಯಂತ್ರಣ ಕ್ರಮಗಳ ಬಗ್ಗೆ ಆಲೋಚಿಸಬೇಕು. ಜತೆಗೆ ಮೈಕಲ್ ಡಿ ಕುನ್ಹಾ ಸಮಿತಿ ನೀಡಿರುವ ಸಲಹೆಗಳನ್ನು ಹಂತ, ಹಂತವಾಗಿ ಪಾಲನೆ ಮಾಡುವುದು ನಮ್ಮ ಆಲೋಚನೆ. ಇದನ್ನು ವೆಂಕಟೇಶ್ ಪ್ರಸಾದ್ ಅವರು ಕೂಡ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದರು.
ನಮ್ಮ ರಾಜ್ಯದ ಗೌರವ, ಸ್ವಾಭಿಮಾನಕ್ಕೆ ಯಾವುದೇ ಧಕ್ಕೆ ಆಗದ ರೀತಿಯಲ್ಲಿ ಕ್ರಿಕೆಟ್ ಅಭಿಮಾನಿಗಳ ಭಾವನೆಗಳಿಗೆ ಸ್ಪಂದಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಐಪಿಎಲ್ ಸೇರಿದಂತೆ ಯಾವುದೇ ಪಂದ್ಯಗಳು ಬೆಂಗಳೂರಿನಿಂದ ಹೊರಗೆ ಹೋಗಲು ಬಿಡುವುದಿಲ್ಲ. ಒಗ್ಗೂಡಿ ಕೆಲಸ ಮಾಡೋಣ ಎಂದು ಕೆಎಸ್‌ಸಿಎ ಪದಾಧಿಕಾರಿಗಳಿಗೆ ತಿಳಿಸಿರುವುದಾಗಿ ಡಿಕೆಶಿ ಹೇಳಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ (IPL 2025) ಚಾಂಪಿಯನ್ ಆದ ಬಳಿಕ, ಈ ಕ್ರೀಡಾಂಗಣದಲ್ಲಿ ಜೂನ್ 4ರಂದು ಅಭಿನಂದನೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ವೇಳೆ ನಿರೀಕ್ಷೆಗೂ ಮೀರಿದ ಜನ ಸಾಗರ ಹರಿದು ಬಂದಿದ್ದರಿಂದ ನೂಕು ನುಗ್ಗುಲು ಉಂಟಾಗಿ ಕಾಲ್ತುಳಿತ ಉಂಟಾಗಿತ್ತು. ಇದರಲ್ಲಿ 12 ಮಂದಿ ಮೃತಪಟ್ಟಿದ್ದರು. ಅಂದಿನಿಂದ ಈ ಅಂಗಣದಲ್ಲಿ ಪಂದ್ಯಗಳು ನಡೆಯುತ್ತಿಲ್ಲ. ಆದರೆ, ಇದೀಗ ಸ್ಡೇಡಿಯಂನಲ್ಲಿ ಪಂದ್ಯ ನಡೆಸಲು ಇದೀಗ ರಾಜ್ಯ ಸರ್ಕಾರ ಅನುಮತಿ ನೀಡಿದೆ.
Advertisement