

ಬೆಂಗಳೂರು: ಅಪರಾಧ ಚಟುವಟಿಕೆಗಳ ಹಿನ್ನೆಲೆ ಇರುವ ರೌಡಿ ಶೀಟರ್‌ಗಳನ್ನು ಪೊಲೀಸರು ಮೌಖಿಕವಾಗಿ ಸಮನ್ಸ್ ಮಾಡುವಂತಿಲ್ಲ. ವಿಚಾರಣೆ ನಡೆಸಬೇಕೆಂದಿದ್ದರೆ ಅಂತಹ ವ್ಯಕ್ತಿಗಳಿಗೆ SMS ಅಥವಾ WhatsApp ಮೂಲಕ ತಿಳಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ರೌಡಿ ಶೀಟ್‌ನಲ್ಲಿ ಹೆಸರಿರುವ ಬೆಂಗಳೂರಿನ ಹೆಬ್ಬಾಳ ನಿವಾಸಿ ಸುನೀಲ್ ಕುಮಾರ್ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಆರ್ ನಟರಾಜ್ ಡಿಸೆಂಬರ್ 4ರಂದು ಈ ಆದೇಶ ಹೊರಡಿಸಿದರು.
ಸುನೀಲ್ ಕುಮಾರ್ ಪರ ವಕೀಲರು, ಅವರು ಸುಧಾರಣೆಗೊಂಡಿದ್ದು ಶಾಂತಿಯುತ ಜೀವನ ನಡೆಸುತ್ತಿದ್ದಾರೆ. ಆದರೆ ಪದೇ ಪದೇ ಪೊಲೀಸರು ಭೇಟಿಯಾಗುವುದು ಮತ್ತು ಮೌಖಿಕ ಸಮನ್ಸ್‌ಗಳು ಬಂಧನದ ಭಯ ಸೃಷ್ಟಿಸಿವೆ. ಇದು ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿವೆ ಎಂದು ವಾದಿಸಿದರು. ರೌಡಿ ರಿಜಿಸ್ಟರ್‌ನಲ್ಲಿ ಅವರ ಹೆಸರು ಸೇರಿಸುವುದು ಹೊರತುಪಡಿಸಿ, ಅವರ ವಿರುದ್ಧ ಯಾವುದೇ ಪ್ರಕರಣಗಳು ಬಾಕಿ ಉಳಿದಿಲ್ಲ. ಇದರ ಹೊರತಾಗಿಯೂ, ಪೊಲೀಸರು ಅವರನ್ನು ಮೌಖಿಕವಾಗಿ ಸಮನ್ಸ್ ಮಾಡಿದ್ದಾರೆ. ವಿಚಾರಣೆಯ ಸಮಯದಲ್ಲಿ ಅವರನ್ನು ನಿಂದಿಸಿದ್ದಾರೆ. ಕಾರಣವಿಲ್ಲದೆ ಬಂಧಿಸಿದ್ದಾರೆ ಎಂದು ಹೇಳಿದ್ದರು.
ಭಾರತೀಯ ನ್ಯಾಯ ಸಂಹಿತಾ ಅಥವಾ ರಾಜ್ಯ ಪೊಲೀಸ್ ಕೈಪಿಡಿ ಈ ರೀತಿಯ ಮೌಖಿಕ ಸಮನ್ಸ್‌ಗೆ ಅವಕಾಶ ನೀಡುವುದಿಲ್ಲ. ರೌಡಿ ಶೀಟರ್‌ಗಳನ್ನು ವಿಚಾರಣೆಗೆ ಕರೆಸಿ, ಅವರ ಹಕ್ಕುಗಳನ್ನು ಉಲ್ಲಂಘಿಸದೆ ಅವರನ್ನು ಬೇಗನೆ ಹೊರಹೋಗಲು ಬಿಡುವುದು ಸಾಮಾನ್ಯ ಪದ್ಧತಿ ಎಂದು ರಾಜ್ಯ ಸರ್ಕಾರ ಪರ ವಕೀಲರು ವಾದಿಸಿದರು. ಬೆಂಗಳೂರಿನಲ್ಲಿರುವ ಸಾವಿರಾರು ರೌಡಿ ಶೀಟರ್‌ಗಳಿಗೆ ಔಪಚಾರಿಕ ನೋಟಿಸ್‌ಗಳನ್ನು ನೀಡುವುದು ಅಪ್ರಾಯೋಗಿಕ ಎಂದು ಹೇಳಿದರು. ಈ ಪ್ರತಿವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ರೌಡಿ ಶೀಟರ್‌ಗಳನ್ನು ಕರೆಸಲು ಯಾವುದೇ ಕಾನೂನು ಕಾರ್ಯವಿಧಾನವಿಲ್ಲದಿದ್ದಾಗ, ಪೊಲೀಸರು ಮೌಖಿಕ ಆದೇಶಗಳನ್ನು ಅವಲಂಬಿಸಲು ಅಥವಾ ಅವರನ್ನು ದೀರ್ಘಕಾಲದವರೆಗೆ ಪೊಲೀಸ್ ಠಾಣೆಗಳಲ್ಲಿ ಇರಿಸಲು ಸಾಧ್ಯವಿಲ್ಲ ಎಂದು ಗಮನಿಸಿತು. ಅಂತಹ ಕ್ರಮಗಳು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ನ್ಯಾಯಪೀಠ ಗಮನಿಸಿತು.
Advertisement