

ಬೆಂಗಳೂರು: ನಾಲ್ಕು ಅಂತಸ್ತಿನ ವಸತಿ ಕಟ್ಟಡವೊಂದು ಬೆಂಕಿಗೆ ಆಹುತಿಯಾಗಿದ್ದು, ಎರಡನೇ ಮತ್ತು ಮೂರನೇ ಮಹಡಿಯಲ್ಲಿ ಸಿಲುಕಿದ್ದ ಆರಕ್ಕೂ ಹೆಚ್ಚು ಜನರು ಮತ್ತು ಮೂರು ನಾಯಿಗಳನ್ನು ಎಚ್‌ಎಸ್‌ಆರ್ ಲೇಔಟ್ ಪೊಲೀಸರು ರಕ್ಷಿಸಿದ್ದಾರೆ.
ಬುಧವಾರ ಮಧ್ಯಾಹ್ನಎಚ್‌ಎಸ್‌ಆರ್ ಲೇಔಟ್ ನ 21ನೇ ಮುಖ್ಯ ರಸ್ತೆಯ ಆರ್‌ಟಿಒ ಕಚೇರಿ ಬಳಿ ಈ ಘಟನೆ ಸಂಭವಿಸಿದ್ದು, ಮೂವರು ಪೊಲೀಸ್ ಸಿಬ್ಬಂದಿ ಸಾರ್ವಜನಿಕರ ಸಹಾಯದಿಂದ ಹಗ್ಗಗಳನ್ನು ಬಳಸಿ ಎರಡನೇ ಮತ್ತು ಮೂರನೇ ಮಹಡಿಯಲ್ಲಿ ಸಿಲುಕಿದ್ದವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ನಾಲ್ಕನೇ ಮಹಡಿಯಲ್ಲಿದ್ದವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಏಣಿಯ ಮೂಲಕ ರಕ್ಷಿಸಿದರು.
“ಕಟ್ಟಡದ ಭದ್ರತಾ ಕೊಠಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಬೆಂಕಿ ತ್ವರಿತವಾಗಿ ಮೂರನೇ ಮಹಡಿಗೆ ಹರಡಿತು, ನಿವಾಸಿಗಳು ಒಳಗೆ ಸಿಲುಕಿಕೊಂಡಿದ್ದರು. ಬೆಂಕಿಯನ್ನು ಗಮನಿಸಿದ ಸ್ಥಳೀಯ ನಿವಾಸಿಯೊಬ್ಬರು ಮಧ್ಯಾಹ್ನ 12.19 ರ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದರು” ಎಂದು ಎಎಸ್‌ಐ ನಾಗರಾಜ್ ಹೇಳಿದ್ದಾರೆ.
ಗಸ್ತು ತಿರುಗುತ್ತಿದ್ದ ಕರ್ತವ್ಯದಲ್ಲಿದ್ದ ನಾಗರಾಜ್, ಹೆಡ್ ಕಾನ್‌ಸ್ಟೆಬಲ್ ಶಿವ ನಾಯಕ್ ಮತ್ತು ಪೊಲೀಸ್ ಕಾನ್‌ಸ್ಟೆಬಲ್ ಚನ್ನಪ್ಪ 11 ನಿಮಿಷಗಳಲ್ಲಿ ತಕ್ಷಣ ಸ್ಥಳಕ್ಕೆ ಧಾವಿಸಿದರು. "ಹೊಗೆಯಿಂದಾಗಿ ಮೆಟ್ಟಿಲುಗಳ ಮೂಲಕ ಒಳಗೆ ಪ್ರವೇಶಿಸುವುದು ಕಷ್ಟಕರವಾಗಿದ್ದರಿಂದ, ಎರಡನೇ ಮತ್ತು ಮೂರನೇ ಮಹಡಿಯಲ್ಲಿ ಸಿಲುಕಿಕೊಂಡಿದ್ದವರನ್ನು ಹಗ್ಗಗಳ ಮೂಲಕ ಹೊರಗೆ ಕರೆತಂದೆವು ಎಂದು ಅವರು ತಿಳಿಸಿದ್ದಾರೆ.
ಹಗ್ಗ ತಂದ ವ್ಯಕ್ತಿಯೂ ರಕ್ಷಣಾ ಕಾರ್ಯಾಚರಣೆಯಲ್ಲಿ ನಮಗೆ ಸಹಾಯ ಮಾಡಿದರು. ಕೆಲವು ಕ್ಷಣಗಳ ನಂತರ, ಭದ್ರತಾ ಸಿಬ್ಬಂದಿಯ ಕೋಣೆಯೊಳಗಿನ ಗ್ಯಾಸ್ ಸಿಲಿಂಡರ್ ಕೂಡ ಸ್ಫೋಟಗೊಂಡು ಬೆಂಕಿ ಮತ್ತಷ್ಟು ತೀವ್ರಗೊಂಡಿತು. ಬಳಿಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತಂಡ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಯಶಸ್ವಿಯಾಗಿ ನಂದಿಸಿತು. ಏಣಿಯನ್ನು ಬಳಸಿ, ಅಗ್ನಿಶಾಮಕ ದಳದ ಸಿಬ್ಬಂದಿ ನಾಲ್ಕನೇ ಮಹಡಿಯಲ್ಲಿ ಸಿಲುಕಿದ್ದವರನ್ನು ಸಹ ರಕ್ಷಿಸಿದರು. ಕಟ್ಟಡದಲ್ಲಿ ಮಹಿಳೆಯರಿದ್ದರು. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ" ಎಂದು ನಾಗರಾಜ್ ಹೇಳಿದ್ದಾರೆ.
ಈ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Advertisement